ಮಂಜೇಶ್ವರ: ಸ್ಥಳೀಯ ರಾಗಸುಧಾ ಸಂಗೀತ ಸಂಸ್ಥೆಯ ವಾರ್ಷಿಕೋತ್ಸವದ ಪ್ರಯುಕ್ತ ಹೊಸಂಗಡಿಯ ವಾಮಂಜೂರಿನ ಶ್ರೀ ಗುರುನರಸಿಂಹ ಸಭಾಭವನದಲ್ಲಿ ಭಾನುವಾರ (ಜ. 19 ರಂದು) ಸಂಜೆ 6 ಗಂಟೆಗೆ ದೂರದರ್ಶನ ಕಲಾವಿದೆ ವಿದುಷಿ ಅರ್ಥಾ ಪೆರ್ಲ ಅವರಿಂದ ನೃತ್ಯಾರ್ಪಣಂ ಎಂಬ ವಿಶೇಷ ಭರತನಾಟ್ಯ ಪ್ರದರ್ಶನ ಏರ್ಪಡಿಸಲಾಗಿದೆ.
ಪಕ್ಕವಾದ್ಯದಲ್ಲಿ ನಟುವಾಂಗದಲ್ಲಿ ವಿದುಷಿ ಅಯನಾ ಪೆರ್ಲ, ಹಾಡುಗಾರಿಕೆಯಲ್ಲಿ ಶಿಲ್ಪಾ ವಿಶ್ವನಾಥ ಭಟ್, ಮೃದಂಗದಲ್ಲಿ ಭಾರ್ಗವ ಕುಂಜತ್ತಾಯ ಮತ್ತು ಕೊಳಲಿನಲ್ಲಿ ಅಭಿಷೇಕ್ ಎಂ. ಬಿ. ಸಹಕರಿಸಲಿದ್ದಾರೆ.
ವಿದುಷಿ ಅರ್ಥಾ ಪೆರ್ಲ ಅವರು ಮೈಸೂರು ದಸರಾ, ಆಳ್ವಾಸ್ ನುಡಿಸಿರಿ, ಕರಾವಳಿ ಉತ್ಸವ, ರಾಷ್ಟ್ರೀಯ ಯುವಜನೋತ್ಸವ, ಚೆನ್ನೈ ಉತ್ಸವ ಮುಂತಾದ ಪ್ರತಿಷ್ಠಿತ ವೇದಿಕೆಗಳಲ್ಲಿ ಭರತನಾಟ್ಯ ಪ್ರದರ್ಶನ ನೀಡಿದ್ದು, ದೂರದರ್ಶನದ ಗ್ರೇಡೆಡ್ ಕಲಾವಿದೆಯೂ ಆಗಿದ್ದಾರೆ. ಪ್ರಸ್ತುತ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಇಂಗ್ಲಿಷ್ ಸ್ನಾತಕೋತ್ತರ ವಿಭಾಗದಲ್ಲಿ ಇಂಗ್ಲಿಷ್ ಅಸಿಸ್ಟೆಂಟ್ ಪೆÇ್ರಫೆಸರ್ ಆಗಿದ್ದು ಪಿಯೆಚ್. ಡಿ. ಅಧ್ಯಯನ ನಡೆಸುತ್ತಿದ್ದಾರೆ.
ಅಪರಾಹ್ನ 4.30 ರಿಂದ ಸಭಾ ಕಾರ್ಯಕ್ರಮದೊಂದಿಗೆ ಸಂಗೀತಶಾಲೆಯ ಗುರುವಂದನ ಜರಗಲಿದೆ. ಕೊಂಡೆವೂರಿನ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಗಣೇಶಮೋಹನ ಕಾಶೀಮಠ, ವಾಮಂಜೂರಿನ ಶ್ರೀ ಗುರುನರಸಿಂಹ ದತ್ತಿ ಮಂಡಳಿಯ ಶ್ರೀಧರ ರಾವ್, ಸಂಗೀತ ಗುರುಗಳಾದ ವಿದ್ವಾನ್ ನಾರಾಯಣ ಭಟ್ ಉಂಡೆಮನೆ, ಸಂಗೀತ ವಿದುಷಿ ಸತ್ಯವತಿ ಮುಡಂಬಡಿತ್ತಾಯ ಮೊದಲಾದವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬೆಳಗ್ಗೆ ಸಂಗೀತಶಾಲೆಯ ವಿದ್ಯಾರ್ಥಿಗಳು ಸಂಗೀತಾರ್ಪಣಂ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

