ಕಾಸರಗೋಡು: ಪ್ರಧಾನಮಂತ್ರಿ ಆವಾಸ್ ಯೋಜನೆ ಪ್ರಕಾರ ಮನೆ ನಿರ್ಮಾಣಕ್ಕಿರುವ ಆರ್ಥಿಕ ಸಹಾಯ ಪಡೆದು, ವಸತಿ ನಿರ್ಮಾಣ ನಡೆಸದೇ ವಂಚನೆ ನಡೆಸಿದವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ದಿಶ(ಡಿಸ್ಟ್ರಿಕ್ಟ್ ಡೆವೆಲಪ್ ಮೆಂಟ್ ಕೋ-ಆರ್ಡಿನೇಷನ್ ಮೋನಿಟರಿಂಗ್ ಕಮಿಟಿ) ಸಭೆ ಮುನ್ನೆಚ್ಚರಿಕೆ ನೀಡಿದೆ.
ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯಲ್ಲಿ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲೆಯ ಪರಪ್ಪ ಬ್ಲಾಕ್ ನ ಕಿನಾನೂರು-ಕರಿಂದಲಂ ಗ್ರಾಮಪಂಚಾಯತ್ ನ ನಿವಾಸಿಗಳಾದ 7 ಕುಟುಂಬದ ಸದಸ್ಯರು ವಸತಿ ನಿರ್ಮಾಣಕ್ಕೆ ಆರ್ಥಿಕ ಸಹಾಯ ಪಡೆದುಕೊಂಡು ಮನೆ ನಿರ್ಮಾ ನಡೆಸದೇ, ಈ ಬಗ್ಗೆ ಸಂಬಂಧಪಟ್ಟವರಿಗೆ ಯಾವ ಮಾಹಿತಿಯನ್ನು ನೀಡದೇ ತಲೆಮರೆಸಿಕೊಂಡಿದ್ದಾರೆ. ಈ ಬಗ್ಗೆ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಭೆ ಆದೇಶ ನೀಡಿದೆ. ಯೋಜನೆ ಪ್ರಕಾರ ಪ್ರತಿ ಬ್ಲೋಕ್ ನಲ್ಲೂ ಹೆಚ್ಚುವರಿ 500 ಮನೆಗಳನ್ನು ಮಂಜೂರು ಮಾಡುವ ನಿಟ್ಟಿನಲ್ಲಿ ಫಲಾನುಭವಿಗಳನ್ನು ಯ್ಕೆ ಮಾಡುವ ಕಾರ್ಯಕ್ರಮ ಇಂದು(ಜ.17) ಜಿಲ್ಲೆಯಲ್ಲಿ ಆರಂಭಗೊಳ್ಳಲಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು. ನೌಕರಿ ಖಾತರಿ ಯೋಜನೆ ಕಾರ್ಮಿಕರಿಗೆ ವೇತನ ರೂಪದಲ್ಲಿ ಲಭಿಸಲು ಬಾಕಿಯಿರುವ 58 ಕೋಟಿ ರೂ..ನ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತವುದಾಗಿ ಸಂಸದ ತಿಳಿಸಿದರು.
ದಿಶ ಸಮಿತಿ ಅವಲೋಕನನಡೆಸುವ 20ಕೇಂದ್ರ ಸರಕಾರಿ ಯೋಜನೆಗಳ ಬಗ್ಗೆ ಮಾತುಕತೆ ನಡೆಸುವ ನಿಟ್ಟಿನಲ್ಲಿ ವಿಶೇಷ ಸಭೆಯೊಂದನ್ನು ಶೀಘ್ರದಲ್ಲಿ ನಡೆಸುವುದಾಗಿ ಸಭೆ ತಿಳಿಸಿದೆ. ನೌಕರಿ ಖಾತರಿ ಯೋಜನೆ ಪ್ರಕಾರ ಪರಿಶಿಷ್ಟ ಪಂಗಡದ ಜನಾಂಗದವರಿಗೆ ಮೀಸಲಾದ 200 ನೌಕರಿ ದಿನಗಳನ್ನು ಬಳಸಿಕೊಂಡ ಪನತ್ತಡಿ ಗ್ರಾಮಪಂಚಾಯತ್ ನ ಕೆ.ಪಿ.ಬಾಲಕೃಷ್ಣನ್, ಪುತ್ತಿಗೆ ಗ್ರಾಮಪಂಚಾಯತ್ ನ ಬಿ.ಸುಶೀಲಾ, ಪೈವಳಿಕೆಯ ಬಾಬು ಕುಟ್ಟಿ ಎಂಬವರನ್ನು ಅಭಿನಂದಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ನಡೆಸಲಾದ ಸಾಧನೆಗಳಿಗೆ ಬಹುಮಾನವಿತರಿಸಲಾಯಿತು.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಪ್ರಧಾನ ಭಾಷಣ ಮಾಡಿದರು. ಸಂಸದರ ಕಾರ್ಯದರ್ಶಿ ಪಿ.ಕೆ.ಫೈಝಲ್, ಬಡತನನಿವಾರಣೆ ವಿಭಾಗ ಯೋಜನೆ ನಿರ್ದೇಶಕ ಕೆ.ಪ್ರದೀಪನ್, ದಿಶಾ ಸಮಿತಿ ಸದಸ್ಯರು, ವಿವಿಧ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

