ಕಾಸರಗೋಡು: ತಿರುವನಂತಪುರದಲ್ಲಿ ರಾಜ್ಯಮಟ್ಟದಲ್ಲಿ ನಡೆಯುತ್ತಿರುವ ಹರಿತ ಕೇರಳಂ ಮಿಷನ್ ಪ್ರದರ್ಶನ ಮೇಳದಲ್ಲಿ ಕಾಸರಗೋಡಿನ ವಿಶೇಷತೆಯುಳ್ಳ ಸ್ಟಾಲ್‍ಗಳು ಗಮನ ಸೆಳೆಯುತ್ತಿದೆ.
ಪ್ಲಾಸ್ಟಿಕ್ ಬಳಕೆಗೆ ಪರ್ಯಾಯ ವ್ಯವಸ್ಥೆಯ ಬಗ್ಗೆ ಸಮಗ್ರ ಮಾಹಿತಿ ತಿಳಿಸುವ ಕಾಸರಗೋಡು ಜಿಲ್ಲೆಯ ಸ್ಟಾಲ್‍ಗಳು ಇಂದಿನ ಅನಿವಾರ್ಯತೆಗೆ ಮಹತ್ವ ನೀಡುತ್ತಿದೆ. ದಿನನಿತ್ಯ ಬಳಸುವ ಪ್ಲಾಸ್ಟಿಕ್ ಸಾಮಾಗ್ರಿಗಳು ಪ್ರಕೃತಿಗೆ ಮಾರಕವಾಗಿರುವುದು ಮತ್ತು ಪ್ರಕೃತಿಗೆ ಪೂರಕವಾಗಿರುವ ಸಾಮಾಗ್ರಿಗಳನ್ನೇ ಪ್ಲಾಸ್ಟಿಕ್‍ಗೆ ಬದಲಾಗಿ ಬಳಸುವ ಬಗೆಗಗಳನ್ನು ಇಲ್ಲಿ ವೈಜ್ಞಾನಿಕ ರೀತಿ ತಿಳಿಸಲಾಗುತ್ತಿದೆ.
ಮಡಿಕೈ ಗ್ರಾಮ ಪಂಚಾಯತ್‍ನಲ್ಲಿ `ಪಾಪ್ಲ' ಎಂಬ ಹೆಸರಿನಲ್ಲಿ ಆರಂಭಿಸಿರುವ ಅಡಕೆ ಹಾಳೆಯ ತಟ್ಟೆ ನಿರ್ಮಾಣ ಘಟಕದ ಉತ್ಪನ್ನಗಳು ಈ ಸ್ಟಾಲ್‍ನ ಪ್ರಧಾನ ಆಕರ್ಷಣೆಯಾಗಿವೆ. ಮಡಿಕೈ ನಿವಾಸಿ ದೇವ ಕುಮಾರ್ ದಂಪತಿ ಹಾಳೆಯಿಂದ ತಯಾರಿಸಿದ ತಟ್ಟೆ, ಲೋಟ, ಪಾತ್ರೆಗಳು ಮುಟ್ಟಪ್ಪಾಳೆ ಇತ್ಯಾದಿಗಳ ಮೂಲಕ ಗಮನ ಸೆಳೆದಿದ್ದಾರೆ. ಬೇಡಗಂ ಕುಂಡಂಕುಳಿಯ ಅಪ್ಪಾರನ್ ಪಾರ್ಕ್ ಕುಟುಂಬಶ್ರೀ ಘಟಕದ ವತಿಯಿಂದ ನಿರ್ಮಿಸಲಾದ ಬಟ್ಟೆ ಚೀಲಗಳು, ಎ.ಆರ್.ಸಿ. ಕರಕುಶಲ ವಸ್ತುಗಳು, ಮುನ್ನಾಡ್‍ನ ಆರ್ಟಿಸ್ಟ್ ರಾಘವನ್ ಅವರು ಹಾಳೆಯಲ್ಲಿ ನಿರ್ಮಿಸಿದ ಗೋಡೆಯಲ್ಲಿ ತೂಗಿಹಾಕುವ ಅಲಂಕಾರ ವಸ್ತುಗಳು, ಕೇರ ಕ್ರಾಫ್ಟ್ ಎಂಬ ಹೆಸರಿನಲ್ಲಿ ಆರ್ಟಿಸ್ಟ್ ಲೋಹಿತಾಕ್ಷನ್ ನಿರ್ಮಿಸುವ ಗೆರಟೆ ಶಿಲ್ಪಗಳು, ದೀಪಗಳು, ಪೆನ್ ಸ್ಟಾಂಡ್, ಕಾಂಞಂಗಾಡ್ ನಗರಸಭೆಯ ಮೂಲಕ ನಿರ್ಮಿಸಲಾದ ಬಟ್ಟೆ ಚೀಲ, ಕಾಲೊರೆಸುವ ಬಟ್ಟೆ ಇತ್ಯಾದಿಗಳು ಈ ಸ್ಟಾಲ್‍ನ ಗರಿಮೆ ಹೆಚ್ಚಿಸುತ್ತಿವೆ. ಜ.22 ವರೆಗೆ ಈ ಮೇಳ ನಡೆಯಲಿದೆ.


