ಪತ್ತನಂತಿಟ್ಟು: ಶಬರಿಮಲೆ ಪೊನ್ನಂಬಲ ಬೆಟ್ಟದಲ್ಲಿ ಬುಧವಾರ ಸಂಜೆ ಮಕರ ಬೆಳಕು ದರ್ಶನವಾಯಿತು. ಪವಿತ್ರ ಜ್ಯೋತಿ ದರ್ಶನವಾಗುತ್ತಿದ್ದಂತೆ ಸ್ವಾಮಿಯೇ ಶರಣಂ ಅಯ್ಯಪ್ಪ ಎಂಬ ಘೋಷ ಮುಗಿಲುಮುಟ್ಟಿತ್ತು. ಮೂರು ಬಾರಿ ಪ್ರಜ್ವಲಿಸಿದ ಮಕರಜ್ಯೋತಿಯನ್ನು ಭಕ್ತಾದಿಗಳು ಕಣ್ತುಂಬಿಕೊಂಡರು. ಸಾಕ್ಷಾತ್ ಅಯ್ಯಪ್ಪದೇವರೇ ಪ್ರತ್ಯಕ್ಷಗೊಂಡಂತೆ ಭಾಸವಾಗುವ ಮಕರಜ್ಯೋತಿ ದರ್ಶನ ವೀಕ್ಷಿಸಲು ಅರಣ್ಯ ಎಲ್ಲೆಡೆ ಕಪ್ಪುವಸ್ತ್ರದ ಸಮುದ್ರವೇ ಹರಿದುಬಂದಂತೆ ಭಾಸವಾಗುತ್ತಿತ್ತು. ಮಕರಜ್ಯೋತಿ ಪ್ರಜ್ವಲಿಸಿ ಮರೆಯಾದರೂ, ಭಕ್ತಾದಿಗಳು ಮಾತ್ರ ಜ್ಯೋತಿಯನ್ನು ಹೃದಯದಲ್ಲಿ ಸ್ಥಾಪಿಸಿಕೊಂಡಿದ್ದರು. ಎರಡೂ ಕೈಗಳನ್ನು ಮೇಲಕ್ಕೆ ಚಾಚಿ ಕೈಮುಗಿದು ಶರಣು ಘೋಷಣೆಯೊಂದಿಗೆ ಜ್ಯೋತಿ ವೀಕ್ಷಿಸಿದರು. 48 ದಿವಸಗಳ ಪವಿತ್ರ ವ್ರತ ಕೈಗೊಂಡು ಅಯ್ಯಪ್ಪ ಸನ್ನಿಧಾನ ತಲುಪಿದ ಭಕ್ತಾದಿಗಳು ಮಕರಜ್ಯೋತಿ ವೀಕ್ಷಣೆಯೊಂದಿಗೆ ಪುನೀತರಾದರು.
ಸಂಜೆ 5.30ಕ್ಕೆ ಸನ್ನಿದಾನ ತಲುಪಿದ ಪವಿತ್ರ ಆಭರಣವನ್ನು ದೇವಸ್ಥಾನದ ತಂತ್ರಿವರ್ಯ ಹಾಗೂ ಮುಖ್ಯ ಅರ್ಚಕರು ಸೇರಿ ದೇಗುಲದೊಳಗೆ ಕೊಂಡೊಯ್ದು, ಶ್ರೀದೇವರ ವಿಗ್ರಹಕ್ಕೆ ಆಭರಣ ತೊಡಿಸಿದ ನಂತರ ದೀಪಾರಾಧನೆ ನಡೆಸಲಾಯಿತು. ಇದಾದ ಅಲ್ಪ ಸಮಯದಲ್ಲಿ ಅಯ್ಯಪ್ಪ ದೇಗುಲದ ಎದುರಿನ ಪೊನ್ನಂಬಲ ಬೆಟ್ಟದಲ್ಲಿ ಮಕರ ಬೆಳಕು ಕಾಣಿಸಿಕೊಂಡಿದೆ.
ಬುಧವಾರ ಬೆಳಗಿನ ಜಾವ 2.09ಕ್ಕೆ ಮಕರ ಸಂಕ್ರಮಣ ಪೂಜೆ ನಡೆಯಿತು. ನಸುಕಿಗೆ ಮಕರಸಂಕ್ರಮ ಪೂಜೆ ನಡೆಯಲಿದ್ದ ಹಿನ್ನೆಲೆಯಲ್ಲಿ, ಮಂಗಳವಾರ ತಡರಾತ್ರಿ ವರೆಗೂ ಶ್ರೀ ದೇವರ ದರ್ಶನಕ್ಕೆ ಭಕ್ತಾದಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಮಕರಸಂಕ್ರಮ ಪೂಜೆ ನಡೆದ ನಂತರ ಹರಿವರಾಸನಂ ಹಾಡಿನೊಂದಿಗೆ ಗರ್ಭಗುಡಿ ಬಾಗಿಲು ಮುಚ್ಚಲಾಗಿತ್ತು. ಮಕರಸಂಕ್ರಮಣ ಪೂಜೆಗಾಗಿ ಡಿಸೆಂಬರ್ 30ರಂದು ಗರ್ಭಗುಡಿ ಬಾಗಿಲು ತೆರೆಯಲಾಗಿತ್ತು.
ಐದು ದಿನಗಳ ಉತ್ಸವದ ನಂತರ ಜನವರಿ 20ರಂದು ಬೆಳಗ್ಗೆ 10ಕ್ಕೆ ಶಬರಿಮಲೆ ಗರ್ಭಗುಡಿ ಬಾಗಿಲು ಮುಚ್ಚಲಾಗುವುದು. ಕುಂಭ ಮಾಸದ ಪೂಜೆಗಾಗಿ ಫೆಬ್ರವರಿ 13ರಂದು ಸಾಯಂಕಾಲ 5ಕ್ಕೆ ಗರ್ಭಗುಡಿ ಬಾಗಿಲು ತೆರೆಯಲಾಗುವುದು.



