ಬದಿಯಡ್ಕ: ವಿಷರಹಿತ ತರಕಾರಿ ಕೃಷಿಯನ್ನು ಬೆಳೆಸುವುದರೊಂದಿಗೆ ಆರೋಗ್ಯಯುಕ್ತವಾದ ಜೀವನವನ್ನು ಸಾಗಿಸಬೇಕೆಂಬ ಧ್ಯೇಯದೊಂದಿಗೆ ರಾಜ್ಯ ಕೃಷಿ ಅಭಿವೃದ್ಧಿ ನಿಗಮದ ವತಿಯಿಂದ ಬದಿಯಡ್ಕ ಕೃಷಿಭವನದಲ್ಲಿ ನಡೆದ `ಜೀವನಿ' ನಮ್ಮ ಕೃಷಿ ನಮ್ಮ ಆರೋಗ್ಯ ಕಾರ್ಯಕ್ರಮಕ್ಕೆ ಬುಧವಾರ ಚಾಲನೆಯನ್ನು ನೀಡಲಾಯಿತು.
ಬದಿಯಡ್ಕ ಕೃಷಿಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳಿಗೆ ಹಾಗೂ ಬದಿಯಡ್ಕದ ಪತ್ರಕರ್ತರಿಗೆ ತರಕಾರಿ ಗಿಡಗಳನ್ನು ವಿತರಿಸಿ ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಉದ್ಘಾಟಿಸಿ ಮಾತನಾಡಿ ನಮ್ಮ ಮನೆಯ ಉಪಯೋಗಕ್ಕಿರುವ ತರಕಾರಿಯನ್ನು ನಾವೇ ಕೃಷಿಮಾಡಬೇಕು. ಸಾವಯವ ಕೃಷಿಯನ್ನು ನೆಚ್ಚಿಕೊಳ್ಳುವ ಮೂಲಕ ವಿಷಮುಕ್ತ ತರಕಾರಿಯ ಸೇವನೆಯಿಂದ ರೋಗಮುಕ್ತ ಜೀವನ ನಮ್ಮದಾಗಬೇಕು. ಈ ನಿಟ್ಟಿನಲ್ಲಿ ಇತರರಿಗೆ ಮಾದರಿಯಾದ ಕಾರ್ಯವನ್ನು ಜನಪ್ರತಿನಿಧಿಗಳು ಹಾಗೂ ಪತ್ರಕರ್ತರು ಮಾಡಿ ತೋರಿಸಬೇಕು ಎಂಬ ಸಲಹೆಯನ್ನು ನೀಡಿದರು.
ಗ್ರಾ.ಪಂ.ಸ್ಥಾಯಿಸಮಿತಿ ಅಧ್ಯಕ್ಷ ಅನ್ವರ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಉಪಾಧ್ಯಕ್ಷೆ ಸೈಬುನ್ನೀಸ, ಬ್ಲಾಕ್ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಎಸ್.ಅಹಮ್ಮದ್, ಜನಪ್ರತಿನಿಧಿಗಳಾದ ಶ್ಯಾಮಪ್ರಸಾದ ಮಾನ್ಯ, ಬಾಲಕೃಷ್ಣ ಶೆಟ್ಟಿ ಕಡಾರು, ವಿಶ್ವನಾಥ ಪ್ರಭು ಕರಿಂಬಿಲ, ಲಕ್ಷ್ಮೀನಾರಾಯಣ ಪೈ, ಶಾಂತಾ ಬಾರಡ್ಕ, ಮುನೀರ್, ಪ್ರೇಮ ಕುಮಾರಿ, ಪ್ರಸನ್ನ, ಜಯಶ್ರೀ, ರಾಜೇಶ್ವರಿ, ಅನಿತಾ ಕ್ರಾಸ್ತಾ ಹಾಗೂ ಬದಿಯಡ್ಕದ ಪತ್ರಕರ್ತರು, ಎಡಿಸಿ ಸದಸ್ಯ ಶಂಕರ ಸಿ.ಎಚ್. ಕೃಷಿಭವನದ ಅಧಿಕಾರಿಗಳಾದ ಜಯರಾಮ, ಉಣ್ಣಿಕೃಷ್ಣನ್ ಉಪಸ್ಥಿತರಿದ್ದರು. ಕೃಷಿಭವನದ ಸಜು ಸ್ವಾಗತಿಸಿ, ಮೋಹನನ್ ವಂದಿಸಿದರು.


