ಪೆರ್ಲ: ದೇಶದ ಬೆನ್ನೆಲುಬಾಗಿ ಇರಬೇಕಾದ ಯುವ ಜನಾಂಗ ಸಾಮಾಜಿಕ ಜಾಲತಾಣಗಳ ಬಳಕೆ, ಮಾದಕ ವಸ್ತುಗಳ ಸೇವನೆ, ದುರ್ಜನರ ಸಹವಾಸ ಮುಂತಾದ ಹಲವಾರು ಕಾರಣಗಳಿಂದಾಗಿ ದಾರಿ ತಪ್ಪುತ್ತಿದ್ದು, ಯುವಕರನ್ನು ಸರಿ ದಾರಿಗೆ ತರುವಲ್ಲಿ ವಿವೇಕಾನಂದರ ಆದರ್ಶಗಳು ಪ್ರೇರಕ ಎಂದು ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ ಅಮೃತಾ ಹೇಳಿದರು.
ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಯುವಜನಾಂಗಕ್ಕೆ ಸ್ವಾಮಿ ವಿವೇಕಾನಂದರು ನೀಡಿದ ಆದ್ಯತೆಯನ್ನು ಮನಗಂಡು ಜ.12ನ್ನು ರಾಷ್ಟ್ರೀಯ ಯುವ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದ್ದು, ಅವರ ಅನುಕರಣೀಯ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಯುವ ದಿನಾಚರಣೆ ಪರಿಪೂರ್ಣತೆಯತ್ತ ಸಾಗುತ್ತದೆ ಎಂದರು.
ಎನ್ನೆಸ್ಸೆಸ್ ಯೋಜನಾಧಿಕಾರಿ ಸುರೇಶ್ ಕೆ. ಎಂ. ಮಾತನಾಡಿ, ಯುವ ಜನಾಂಗ ತಾನು ತನ್ನದೆಂಬುದನ್ನು ಮರೆತು, ತಮ್ಮ ಅಮೂಲ್ಯವಾದ ಸಮಯವನ್ನು ಪೆÇೀಲು ಮಾಡದೇ, ಸಾಮಾಜಿಕ ಸೇವೆ, ರಾಷ್ಟ್ರ ಸೇವೆಗೆ ಮೀಸಲಿಟ್ಟಲ್ಲಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ, ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ರೂಪುಗೊಳ್ಳುವಲ್ಲಿ ಸಂಶಯವಿಲ್ಲ ಎಂದರು. ಸದೃಢ ಸಮಾಜ ಕಟ್ಟಿ ಬೆಳೆಸಲು ಯುವ ಜನಾಂಗ ಗಟ್ಟಿ ಹೆಜ್ಜೆಯನ್ನಿಡುವ ಅವಶ್ಯವಿದೆ. ಯುವ ಜನಾಂಗ ಆಲಸ್ಯ ಮತ್ತು ದುಷ್ಚಟಗಳಿಂದ ದೂರವಾಗಿದ್ದು, ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಒಗ್ಗಟ್ಟಾಗಿ ಶ್ರಮಿಸಬೇಕಾಗಿದೆ ಎಂದರು.
ಎನ್ನೆಸ್ಸೆಸ್ ಕಾರ್ಯದರ್ಶಿ ಕಾವ್ಯ, ಅಂಜನಾ, ಜಗತ್, ಅಜಿತ್ ಉಪಸ್ಥಿತರಿದ್ದರು. ಅಂಕಿತಾ ಸ್ವಾಗತಿಸಿದರು. ಅಂಜನಾ ವಂದಿಸಿದರು. ನವ್ಯಶ್ರೀ ನಿರೂಪಿಸಿದರು.


