ಬದಿಯಡ್ಕ: ಗೋಸಾಡ ಪೊನ್ನೆಂಗುಯಿ ಶ್ರೀ ಧೂಮಾವತೀ ದೈವಸ್ಥಾನದ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳ ನೇತೃತ್ವದಲ್ಲಿ ಬುಧವಾರ ಜರಗಿತು.
ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಪೂರ್ವಾಹ್ನ ಉಗ್ರಾಣ ತುಂಬಿಸುವುದು, ಸಾಯಂಕಾಲ ಶ್ರೀ ಸುಬ್ರಹ್ಮಣ್ಯ, ನಾಗರಾಜ, ನಾಗಕನ್ನಿಕೆ ಧೂಂಬ್ರ ಎಂಬಲ್ಲಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ, ಹಾಗೂ ಕ್ಷೇತ್ರಕ್ಕೆ ಆಗಮಿಸಿದ ತಂತ್ರಿಗಳಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಸಾಯಂಕಾಲ ಪುಣ್ಯಾಹವಾಚನೆ, ಸ್ಥಳ ಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ ನಡೆಯಿತು. ಬುಧವಾರ ಬೆಳಗ್ಗೆ ಗಣಪತಿಹೋಮ, ಬ್ರಹ್ಮಕಲಶಪೂಜೆ, 10.34ರ ಮೀನ ಲಗ್ನ ಸುಮುಹೂರ್ತದಲ್ಲಿ ಪುನಃಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಜರಗಿತು. ನಂತರ ತಂಬಿಲ, ನಿತ್ಯನೈಮಿತ್ತಿಕಾದಿಗಳ ನಿರ್ಣಯ, ಮಂತ್ರಾಕ್ಷತೆ, ಅನ್ನಸಂತರ್ಪಣೆ ಜರಗಿತು.
ಸಂಜೆ ಪಾವೂರು ಶ್ರೀ ಧೂಮಾವತಿ ದೈವಸ್ಥಾನದಿಂದ ಧೂಮಾವತಿ ದೈವದ ಭಂಡಾರದ ಆಗಮನ, ತೊಡಂಗಲ್, ಕೊರತಿ ಕೋಲ ನಡೆಯಿತು. ಗುರುವಾರ ಬೆಳಗ್ಗೆ ಧೂಮಾವತಿ ದೈವದ ಕೋಲ, ಪ್ರಸಾದ ವಿತರಣೆ, ಮಧ್ಯಾಹ್ನ ಭೋಜನದೊಂದಿಗೆ ಕಾರ್ಯಕ್ರಮಗಳು ಸಂಪನ್ನವಾಯಿತು.


