HEALTH TIPS

ವಿಶೇಷ ಚೇತನರ ಸೌಹಾರ್ದ ಯೋಜನೆಗಳ ಮೂಲಕ ಮಾದರಿಯಾಗುತ್ತಿರುವ ಕಾರಡ್ಕ ಬ್ಲಾಕ್ ಪಂಚಾಯತಿ


            ಮುಳ್ಳೇರಿಯ: ವಿಶೇಷ ಚೇತನರ ಸೌಹಾರ್ದ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಕಾರಡ್ಕ ಬ್ಲಾಕ್ ಪಂಚಾಯತಿ ಮಾದರಿಯಾಗಿದೆ.
           ಮಲೆನಾಡ ಪ್ರದೇಶಗಳನ್ನೂ ಹೊಂದಿರುವ ಈ ಪ್ರದೇಶದಲ್ಲಿ "ಎಲ್ಲರಿಗೂ ಆರೋಗ್ಯ" ಎಂಬ ಸದಾಶಯದೊಂದಿಗೆ ಹಾಸುಗೆ ಹಿಡಿದ ರೋಗಿಗಳ ಸಹಿತ ವಿಶೇಷ ಚೇತನರಿಗೆ ಸಾಂತ್ವನದ ಸ್ಪರ್ಶ ನೀಡುತ್ತಿದೆ. "ಸೆಕೆಂಡರಿ ಪಾಲಿಯೇಟಿವ್" ಎಂಬ  ಯೋಜನೆ ಮೂಲಕ ಅನೇಕ ಚಟುವಟಿಕೆಗಳು ಬ್ಲಾಕ್ ನ ನೇತೃತ್ವದಲ್ಲಿ ನಡೆಯುತ್ತಿವೆ.
           ಮೊದಲ ಹಂತದಲ್ಲಿ ಬ್ಲಾಕ್ ಪಂಚಾಯತಿ ವ್ಯಾಪ್ತಿಯಲ್ಲಿ ಸ್ವಯಂಸೇವಾ ರಂಗದಲ್ಲಿ ಆಸಕ್ತರಾದ ಯುವಜನತೆಯನನು ಪತ್ತೆ ಮಾಡಿ, ಅವರಿಗೆ ತರಬೇತು ನೀಡಲಾಗಿದೆ. ಮುಳಿಯಾರು ಸಮುದಾಯ ಆರೋಗ್ಯ ಕೇಂದ್ರ ಮತ್ತು ಬೇಡಗಂ ತಾಲೂಕು ಆಸ್ಪತ್ರೆಯ ಸಿಬ್ಬಂದಿಯೊಂದಿಗೆ ಸ್ವಯಂಸೇವಕರನ್ನೂ ಸೇರಿಸಿ ಪರಿಣತ ತಂಡವೊಂದನ್ನು ರಚಿಸಲಾಗಿದೆ. ನಂತರ ಆಸ್ಪತ್ರೆಯ ಗಣನೆ ಪ್ರಕಾರ ಹಾಸುಗೆ ಹಿಡಿದ ರೋಗಿಗಳ ಮನೆಗಳಿಗೆ ಪ್ರತಿವಾರ ಭೇಟಿ ನೀಡಿ ಅಗತ್ಯದ ಶುಶ್ರೂಷೆ, ಚಿಕಿತ್ಸೆ ನೀಡಲಾಗುತ್ತಿದೆ. ಈ ವೇಳೆ ತುರ್ತು ಸಹಾಯ ಅಗತ್ಯವಿದ್ದವರಿಗೆ ಎಲ್ಲ ಸೌಲಭ್ಯಗಳನ್ನೂ ಒದಗಿಸಲಾಗುತ್ತಿದೆ.
         9 ಲಕ್ಷ ರೂ. ವೆಚ್ಚದಲ್ಲಿ ವಿಶೇಷ ಚೇತನರಿಗೆ ಬೇಕಾದ ಸಹಾಯ ಉಪಕರಣಗಳನ್ನು ಬ್ಲಾಕ್ ಪಂಚಾಯತಿ ಮಟ್ಟದಲ್ಲಿ ಖರೀದಿಸಿ, ಇಲ್ಲಿನ ವ್ಯಾಪ್ತಿಯ ಎರಡು ಆಸ್ಪತ್ರೆಗಳಲ್ಲಿ ಇರಿಸಲಾಗಿದೆ. ಅರ್ಹ ರೋಗಿಗಳಿಹೆ ಅವುಗಳನ್ನು ವಿತರಿಸಲಾಗುತ್ತಿದೆ. ಒಂದೊಮ್ಮೆ ಈ ರೋಗಿ ನಿಧನರಾದರೆ, ಮನೆಮಂದಿ ಈ ಉಪಕರಣಗಳನ್ನು ಆಸ್ಪತ್ರೆಗಳಿಗೆ ಮರಳಿಸಬೇಕು ಎಂಬುದು ಇಲ್ಲಿನ ನಿಬಂಧನೆ. ಗಾಲಿಕುರ್ಚಿ, ಜಲಹಾಸುಗೆ, ಕತ್ತೀಡ್ರಲ್ ಸಹಿತ ಅನೇಕ ಉಪಕರಣಗಳು ಈ ನಿಟ್ಟಿನಲ್ಲಿ ಇವೆ. ಆಂಬುಲೆನ್ಸ್ ಅಲ್ಲದೆ ಎರಡು ಆಸ್ಪತ್ರೆಗಳಲ್ಲೂ ಜೀಪು ಸೌಲಭ್ಯಗಳಿವೆ. ಪರರ ಸಹಾಯವಿಲ್ಲದೆ ರೋಗಿಗಳನ್ನು ಆಸ್ಪತ್ರೆಗೆ ಕರೆತರಲು ಈ ಜೀಪುಗಳನ್ನು ಬಳಸಲಾಗುತ್ತಿದೆ.
          ಒಬ್ಬ ಸ್ಟಾಫ್ ನರ್ಸ್, 5 ಅಥವಾ ಅದಕ್ಕಿಂತ ಅಧಿಕ ಸ್ವಯಂಸೇವಕರು ಸೇರಿರುವ ತಂಡ ಮನೆ ಸಂದರ್ಶನ ನಡೆಸುತ್ತದೆ. ಕುತ್ತಿಕೋಲ್, ದೇಲಂಪಾಡಿ, ಬೇಡಡ್ಕ ಗ್ರಾಮಪಂಚಾಯತಿಗಳಲ್ಲಿ ಬೇಡಗಂ ತಾಲೂಕು ಆಸ್ಪತ್ರೆಯ "ಹೋಂ ಕೇರ್" ಎಂಬ ಹೆಸರಿನ ಈ ಚಟುವಟಿಕೆ ನಡೆಸುತ್ತಿದೆ. ತಾಲೂಕು ಆಸ್ಪತ್ರೆ ವ್ಯಾಪ್ತಿಯಲ್ಲಿ ವಿಶೇಷ ಚೇತನರ, ಹಾಸುಗೆ ಹಿಡಿದ ರೋಗಿಗಳು ಸಹಿತ 115 ಮಂದಿ ಇದ್ದಾರೆ. ಇಲ್ಲಿ 12 ಹೋಂಕೇರ್, 4 ವಿಶೇಷ ಹೊರರೋಗಿ ಚಿಕಿತ್ಸಾ ಸೌಲಭ್ಯ, 3 ಫಿಸಿಯೋ ಥೆರಪಿ(ಥೆರಪಿಸ್ಟ್ ಮನೆಗಳಿಗೆ ತೆರಳಿ ಚಿಕಿತ್ಸೆ ನೀಡುತ್ತಾರೆ) ಸೌಕರ್ಯಗಳಿವೆ. ಮುಳ್ಳೇರಿಯ ಸಮುದಾಯ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಕುಂಬ್ಡಾಜೆ, ಕಾರಡ್ಕ, ಬೆಳ್ಳೂರು, ಮುಳಿಯಾರು ಗ್ರಾಮಪಂಚಾಯತಿಗಳಿವೆ. ಸಮುದಾಯ ಆರೋಗ್ಯ ಕೇಂದ್ರಗಳ ಮೂಲಕ 195 ಮಂದಿಗೆ ಶುಶ್ರೂಷೆ ನೀಡಲಾಗುತ್ತಿದೆ. ಈ 4 ಗ್ರಾಮಪಂಚಾಯತಿಗಳಲ್ಲಿ ಪ್ರತಿ ತಿಂಗಳು ತಲಾ 12 ಸಂದರ್ಶನ ಕಡ್ಡಾಯವಾಗಿ ನಡೆಯುತ್ತದೆ. ಗ್ರಾಮಪಂಚಾಯತಿಗಳು ನೀಡಲು ಪ್ರಾಥಮಿಕ ಶುಶ್ರೂಷೆ ಸಾಲದೇ ಹೋದವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಮತ್ತು ತಾಲಕು ಆಸ್ಪತ್ರೆಯ ಶುಶ್ರೂಷೆ ಒದಗಿಸಲಾಗುತ್ತದೆ.
        ಬ್ಲಾಕ್ ವ್ಯಾಪ್ತಿಯ ಗ್ರಾಮಪಂಚಾಯತಿಗಳ ವಿಶೇಷ ಚೇತನರಿಗಾಗಿ ಬೇಡಗಂ ಆಸ್ಪತ್ರೆಯಲ್ಲೂ, ಬೋವಿಕ್ಕಾನ ಸೌಪರ್ಣಿಕಾ ಸಭಾಂಗಣದಲ್ಲೂ  ಸ್ವ ಉದ್ಯೋಗ ತರಬೇತಿ ನೀಡಲಾಗಿದೆ. ಸಾಬೂನು, ಸಾಬೂನು ಪುಡಿ, ಫಿನಾಯಿಲ್, ಕಾಗದದ ಪೆನ್ ಇತ್ಯಾದಿ ತಯಾರಿಯ ತರಬೇತು ಈ ವೇಳೆ ಒದಗಿಸಲಾಗಿದೆ. ವಿಶೇಷ ಚೇತನರು ಸ್ವಾವಲಂಬಗಳಾಗುವ ನಿಟ್ಟಿನಲ್ಲಿ ಈ ಚಟುವಟಿಕೆ ನಡೆಸಲಾಗುತ್ತಿದೆ. ತರಬೇತಿ ಲಭಿಸಿದವರು ಈಗ ರಾಜ್ಯ ಸರ್ಕಾರದ ವಿವಿಧ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿದ್ದಾರೆ.
      ಸಾಮಾಜಿಕ ಕಾರ್ಯಕರ್ತರ ಸಹಾಯದೊಂದಿಗೆ ವಿಶೇಷ ಚೇತನರಾಗಿರುವ ಯುವಜನತೆಗೆ ಆಹಾರ ಕಿಟ್ ಬೆಡ್ ಶೀಟ್ ಸಹಿತ ಅನಿವಾರ್ಯ ಸಾಮಾಗ್ರಿಗಳ ವಿತರಣೆ ನಡೆಸಲಾಗಿದೆ. ಜನಪರ ಚಟುವಟಿಕೆಗಳ ಮೂಲಕ ಆರೋಗ್ಯ ಪೂರ್ಣ ಸಮಾಜ ನಿರ್ಮಾಣದ ಉದ್ದೇಶದೊಂದಿಗೆ ಬ್ಲಾಕ್ ಪಂಚಾಯತಿ ಇನ್ನಷ್ಟು ಯೋಜನೆಗಳನ್ನು ಜಾರಿಗೊಳಿಸಲು ಉತ್ಸುಕವಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries