ಉಪ್ಪಳ: ಬಾಯಾರು ಕನಿಯಾಲದ ವಾಟೆತ್ತಿಲ ಕೊರಗ ಕಾಲನಿಯ ಸ್ತ್ರೀಯೋರ್ವೆಗೆ ಮಂಗಳವಾರ ತಡರಾತ್ರಿ ಪ್ರಸವ ವೇದನೆ ಉಂಟಾಗಿದ್ದು, ಸಮರೋಪಾದಿಯಲ್ಲಿ ನೆರವಿಗೆ ಧಾವಿಸಿದ ಬಾಯಾರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು, ಸಿಬ್ಬಂದಿಗಳ ಸಮಯೋಚಿತ ನೆರವಿಂದ ಸುಖಪ್ರಸವ ಸಾಧ್ಯವಾಗಿದ್ದು ಸಾರ್ವಜನಿಕರ ಮುಕ್ತ ಪ್ರಶಂಸೆಗೆ ಕಾರಣವಾಗಿದೆ.
ಕಾಲನಿಯ ನಿವಾಸಿ ಕೊರಗ ಸಮುದಾಯದ ಸುಂದರ ಎಂಬವರ ಪತ್ನಿ ಲಲಿತಾ ಅವರ ನಾಲ್ಕನೇ ಹೆರಿಗೆಯ ಕಾಲ ಸಮೀಪಿಸಿದ್ದಾಗ ಸರ್ಕಾರಿ ಸೌಲಭ್ಯಗಳನ್ನು ಬಳಸಲು ವೈದ್ಯರು ಸೂಚಿಸಿದ್ದರೂ ಬಳಸದೆ ಇದ್ದ ಈ ದಂಪತಿಗಳಿಗೆ ಮಂಗಳವಾರ ತಡರಾತ್ರಿ ತೀವ್ರ ಪ್ರಸವ ವೇದನೆ ಅನುಭವಕ್ಕೆ ಬಂದಿತು. ವಿಷಯ ತಿಳಿದು ಧಾವಿಸಿದ ಬಾಯಾರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಗೌತಮ್ ರಂಜನ್, ಸಹಾಯಕರಾದ ಶ್ರೀಜಾ ಎಸ್., ಪೀಟರ್, ಪರಿಶಿಷ್ಟ ಪಂಗಡದ ಪ್ರಮೋಟರ್ ಸಂದೀಪ್ ಸಮಯೋಚಿತರಾಗಿ ಸ್ಪಂದಿಸಿ ಸುಖ ಪ್ರಸವಕ್ಕೆ ಸಹಕರಿಸಿದರು. ಬಳಿಕ ತಾಯಿ ಮತ್ತು ಶಿಶುವನ್ನು ವೈದ್ಯಕೀಯ ತಂಡವು 108 ಆಂಬುಲೆನ್ಸ್ ವಾಹನದಲ್ಲಿ ಕಾಸರಗೋಡು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿ ಹೆಚ್ಚಿನ ಆರೈಕೆ ನೀಡಲಾಯಿತು.
ಬಾಯಾರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಗಳ ಕಾರ್ಯವನ್ನು ಪೈವಳಿಕೆ ಗ್ರಾ.ಪಂ. ಆಡಳಿತ ಮಂಡಳಿ ಹಾಗೂ ಸಾರ್ವಜನಿಕರು ಮುಕ್ತಕಂಠದಿಂದ ಶ್ಲಾಘಿಸಿರುವರು. ಶುದ್ದ ಕುಡಿಯುವ ನೀರು ಮತ್ತು ವಿದ್ಯುತ್ ಸೌಕರ್ಯಗಳಿಂದ ವಂಚಿತವಾಗಿರುವ ಇಲ್ಲಿಯ ಕೊರಗ ಕಾಲನಿಯ ಕುರಿತಾಗಿ ಈ ಹಿಂದೆ ಸಾಕಷ್ಟು ವರದಿಗಳು ಪ್ರಕಟವಾಗಿರುವುದು ಗಮನಾರ್ಹ.

