ಬದಿಯಡ್ಕ: ವಿವಿಧ ಕ್ಷೇತ್ರಗಳಲ್ಲಿ ಇಂದು ದುಡಿಯುತ್ತಿರುವ ಅನೇಕ ಪ್ರತಿಭಾನ್ವಿತರ ಗುರುಕುಲವಾಗಿ ಕುಂಟಿಕಾನ ಶಾಲೆಯು ಪ್ರಸಿದ್ಧಿಯನ್ನು ಪಡೆದಿದೆ. ಶಾಲಾ ವಾರ್ಷಿಕೋತ್ಸವವನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳ ಪ್ರತಿಭೆಗಳ ಪ್ರದರ್ಶನಕ್ಕೆ ವೇದಿಕೆಯು ದೊರಕಿದಂತಾಗುತ್ತದೆ ಎಂದು ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಹೇಳಿದರು.
ಕುಂಟಿಕಾನ ಅನುದಾನಿತ ಹಿರಿಯ ಬುನಾದಿ ಶಾಲೆಯ ವಾರ್ಷಿಕೋತ್ಸವ ಹಾಗೂ ಮುಖ್ಯೋಪಾಧ್ಯಾಯ ಪಿ.ಮಹಾಲಿಂಗೇಶ್ವರ ಭಟ್ ಅವರ ಬೀಳ್ಕೊಡುಗೆ ಸಮಾರಂಭವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ಬದಿಯಡ್ಕ ಗ್ರಾಮಪಂಚಾಯಿತಿ ಸದಸ್ಯೆ ಜಯಂತಿ ಅಧ್ಯಕ್ಷತೆಯನ್ನು ವಹಿಸಿದ್ದರು. ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಯತೀಶ್ ಕುಮಾರ್ ರೈ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ ಈ ಶಾಲೆಯ ಚಟುವಟಿಕೆಗಳು ಉತ್ತಮ ರೀತಿಯಲ್ಲಿ ನಡೆಯುತ್ತಿರುವುದು ಗಮನಾರ್ಹ. ನಮ್ಮ ಪೂರ್ವಸಿದ್ಧತೆಗಳು ನಮ್ಮನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯುತ್ತವೆ. ಇಲ್ಲಿನ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಕರು ಯೋಜನಾಬದ್ಧವಾಗಿ ಮುಂದುವರಿಯುತ್ತಿರುವುದು ವಿದ್ಯಾರ್ಥಿಗಳಿಗೆ ಅನುಕೂಲವಾಗಿ ಪರಿಣಮಿಸಿದೆ. ಶಾಲೆಗೆ ಲಭಿಸಬೇಕಾದ ಎಲ್ಲಾ ಸವಲತ್ತುಗಳನ್ನು ದೊರಕಿಸಿಕೊಡುವಲ್ಲಿ ಶಾಲಾ ಪ್ರಬಂಧಕರ ಶ್ರಮವಿದೆ. ಮಾತೃಭಾಷೆಯಿಂದ ವಿದ್ಯಾರ್ಥಿಗಳು ವಂಚಿತರಾಗಬಾರದು. ಬಡವ ಬಲ್ಲಿದನೆಂಬ ಬೇಧವಿಲ್ಲದೆ ವಿದ್ಯಾಭ್ಯಾಸದೊಂದಿಗೆ ನಲಿಯುವ ಸ್ಥಳವಾಗಿದೆ ಸಾರ್ವಜನಿಕ ಶಿಕ್ಷಣ ಸಂಸ್ಥೆ. ಇಂತಹ ಸಂಸ್ಥೆಗಳನ್ನು ಬೆಳೆಸುವಲ್ಲಿ ಊರವರ ಪಾತ್ರ ಹಿರಿದು ಎಂದು ಶಾಲೆಯ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿದರು.
ನಿವೃತ್ತರಾಗಲಿರುವ ಮುಖ್ಯೋಪಾಧ್ಯಾಯ ಪಿ. ಮಹಾಲಿಂಗೇಶ್ವರ ಭಟ್ ಅವರು ಗೌರವಾರ್ಪಣೆಯನ್ನು ಸ್ವೀಕರಿಸಿ ಮಾತನಾಡಿ ತನ್ನ ಶಾಲಾ ಜೀವನದ ಅನುಭವಗಳನ್ನು ಬಿಚ್ಚಿಟ್ಟರು. ಶಾಲಾ ವ್ಯವಸ್ಥಾಪಕ ಶಂಕರನಾರಾಯಣ ಶರ್ಮ ಕುಂಟಿಕಾನ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಜಸ್ಟಿನ್ ಜೋಸ್, ಮಾತೃಸಂಘದ ಅಧ್ಯಕ್ಷೆ ಪ್ರೇಮಲತ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಜೋನ್ ಡಿ.ಸೋಜ, ವಿದ್ಯಾಲಯ ಅಭಿವೃದ್ಧಿ ಸಮಿತಿಯ ಸಂಚಾಲಕ ಆಸಿಫ್ ಆಲಿ ಪಾಡ್ಲಡ್ಕ, ಪೂರ್ವ ವಿದ್ಯಾರ್ಥಿ ಉಮ್ಮರ್ ಪಾಡಲಡ್ಕ, ನೌಕರ ಸಂಘದ ಕಾರ್ಯದರ್ಶಿ ಗಣೇಶ್ ಭಟ್, ಎಸ್.ಆರ್.ಜಿ. ಸಂಚಾಲಕ ಕೃಷ್ಣನ್ ನಂಬೂದಿರಿ ಶುಭಾಶಂಸನೆಗೈದರು. ನಿವೃತ್ತ ಶಾಲಾ ಅಧ್ಯಾಪಕರುಗಳಾದ ಗೋಪಾಲ ಜಾಡ ಎಂ., ಸರಳಿ ಸುಬ್ರಹ್ಮಣ್ಯ ಭಟ್, ಬಿಆರ್‍ಸಿಯ ಮಮತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಾರ್ಷಿಕೋತ್ಸವ ಸಮಿತಿ ಸಂಚಾಲಕ, ಹಿರಿಯ ಅಧ್ಯಾಪಕ ವಾಶೆ ವೆಂಕಟ್ರಾಜ ಸ್ವಾಗತಿಸಿ, ಅಧ್ಯಾಪಕ ಎ.ರಾಧಾಕೃಷ್ಣನ್ ವಂದಿಸಿದರು. ಅಧ್ಯಾಪಕರುಗಳಾದ ಪ್ರಶಾಂತ ಕುಮಾರ್ ಬಿ., ಅಬ್ದುಲ್ ಸಲಾಂ ನಿರೂಪಿಸಿದರು. ಬೆಳಗ್ಗೆ ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಲ್ಯಾನ್ಸ್ ಡಿಸೋಜ ಧ್ವಜಾರೋಹಣಗೈದರು. ವಿದ್ಯಾರ್ಥಿಗಳು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಸಂಜೆ ಪ್ರಸಿದ್ಧ ಮಿಮಿಕ್ರಿ ಕಲಾವಿದ ಸುರೇಶ್ ಯಾದವ್ ಮುಳ್ಳೇರಿಯ ಇವರಿಂದ ಮಿಮಿಕ್ರಿ ಕಾರ್ಯಕ್ರಮ ಮನರಂಜಿಸಿತು. ಶಾಲಾ ಹಳೆವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡಿತು.



