HEALTH TIPS

ಮಂಜೇಶ್ವರದಲ್ಲಿ ನೋಂದಣಿ ಕಚೇರಿಯ ನೂತನ ಕಟ್ಟಡದ ಲೋಕಾರ್ಪಣೆ- ಲೋಕೋಪಯೋಗಿ ಇಲಾಖೆ ಅತ್ಯಾಧುನೀಕರಣದತ್ತ : ಸಚಿವ ಜಿ.ಸುಧಾಕರನ್

 
          ಮಂಜೇಶ್ವರ: ರಾಜ್ಯ ಸರ್ಕಾರಿ ಇಲಾಖೆಗಳಲ್ಲಿ ಅತ್ಯಂತ ಹಳೆಯ ವಿಭಾಗವಾಗಿರುವ ನೋಂದಣಿ ಇಲಾಖೆ ಅತ್ಯಾಧುನೀಕರಣದತ್ತ ದಾಪುಗಾಲಿರಿಸುತ್ತಿದೆ ಎಂದು ಲೋಕೋಪಯೋಗಿ-ನೋಂದಣಿ ಸಚಿವ ಜಿ.ಸುಧಾಕರನ್ ತಿಳಿಸಿದರು.
       ಮಂಜೇಶ್ವರದಲ್ಲಿ ನೋಂದಣಿ ಕಚೇರಿಯ ನೂತನ ಕಟ್ಟಡವನ್ನು ಗುರುವಾರ ನಡೆದ ಸಮಾರಂಭದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
  ಇಲಾಖೆಯ ಸೇವೆ ಸಂಬಂಧ ಸಾರ್ವಜನಿಕ ವಲಯದಲ್ಲಿ ದೂರುಗಳು ಕಡಿಮೆಯಾಗುತ್ತಿರುವುದೂ ಈ ನಿಟ್ಟಿನಲ್ಲಿ ಆರೋಗ್ಯಪೂರ್ಣ ಬೆಳವಣಿಗೆಯಾಗಿದೆ. ಫಲಾನುಭವಿಗಳ ಜೊತೆ ಸಿಬ್ಬಂದಿ ನಕಾರಾತ್ಮಕ ಧೋರಣೆ ತೋರುತ್ತಿರುವ, ಅಧಿಕ ಶುಕ್ಕ ಈಡುಮಾಡುತ್ತಿರುವ ಸಹಿತ ಅನೇಕ ಆರೋಪಗಳು ಇಲಾಖೆಗೆ ಸಂಬಂಧಿಸಿ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದ್ದುವು. ಈ ಬಗ್ಗೆ ರಾಜ್ಯ ಸರ್ಕಾರ ಕೈಗೊಳ್ಳುತ್ತಿರುವ ತುರ್ತು ಕ್ರಮ, ಆರೋಪಿಗಳ ವಿರುದ್ಧ ಕಠಿಣ ಕ್ರಮಗಳ ಪರಿಣಾಮ ದೂರುಗಳು ಗಮನಾರ್ಹವಾಗಿ ಕಡಿಮೆಯಾಗಿವೆ. ಈ ನಿಟ್ಟಿನಲ್ಲಿ ಇಲಾಖೆಯ ಮುಖಚರ್ಯೆ ಬದಲಿಸಲು ಹೆಗಲು ನಿಡಿದ ಸಿಬ್ಬಂದಿಯೂ ಅಭಿನಂದನಾರ್ಹರು ಎಂದವರು ನುಡಿದರು. 
         ನೂತನ ಕಾಲದಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಇಲಾಖೆಗಳು ಚಟುವಟಿಕೆ ನಡೆಸಿದರೆ, ಜನೋಪಯೋಗಿಯಾಗಿರುವ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಲು ಪೂರಕವಾಗಲಿದೆ. ಆನ್ ಲೈನ್ ದಸ್ತಾವೇಜು ನೋಂದಣಿ, ಇ-ಸ್ಟಾಂಪಿಂಗ್, ದಸ್ತಾವೇಜು ನಕಲು ಸಿದ್ಧತೆ ಸಂಬಂಧ ಡಿಜಿಟಲ್ ಇಮೇಜ್ ಪ್ರಿಂಟಿಂಗ್ ಸಹಿತ ಅನೇಕ ನೂತನ ಸೌಲಭ್ಯಗಳು ಜಾರಿಗೊಳ್ಳುತ್ತಿವೆ. ದಸ್ತಾವೇಜುಗಳನ್ನು ಡಿಜಿಟಲೈಸೇಷನ್ ರೂಪದಲ್ಲಿ ಕಾಯ್ದಿರಿಸುವ ಕ್ರಮಗಳೂ ಪ್ರಗತಿಯಲ್ಲಿವೆ ಎಂದು ಸಚಿವ ತಿಳಿಸಿದರು.
        ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿದ್ದರು. ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಕೆ.ಕುಂಞÂರಾಮನ್, ನೋಂದಣಿ ಇನ್ಸ್‍ಪೆಕ್ಟರ್ ಜನರಲ್ ಎ.ಅಲೆಕ್ಸಾಂಡರ್, ವಿವಿಧ ಗ್ರಾಮಪಂಚಾಯತುಗಳ ಅಧ್ಯಕ್ಷರಾದ ಅಝೀಜ್ ಹಾಜಿ, ಷಾಹುಲ್ ಹಮೀದ್ ಬಂದ್ಯೋಡು, ಭಾರತಿ ಜೆ.ಶೆಟ್ಟಿ, ಬಿ.ಎ.ಅಬ್ದುಲ್ ಮಜೀದ್, ನೋಂದಣಿ ಸಹಾಯಕ ಇನ್ಸ್‍ಪೆಕ್ಟರ್ ಜನರಲ್ ಪಿ.ಚಂದ್ರನ್, ಜಿಲ್ಲಾ ಪಂಚಾಯತಿ ಸ್ಥಾಯೀ ಸಮಿತಿಗಳ ಅಧ್ಯಕ್ಷ ಫರೀದಾ ಝಕೀರ್ ಅಹಮ್ಮದ್, ಹರ್ಷಾದ್ ವರ್ಕಾಡಿ, ಮಂಜೇಶ್ವರ ಬ್ಲಾಕ್ ಪಂಚಾಯತಿ ಸ್ಥಾಯೀ ಸಮಿತಿ ಅಧ್ಯಕ್ಷ ಕೆ.ಎಂ.ಕೆ.ಅಬ್ದುಲ್ ರಹಮಾನ್ ಹಾಜಿ, ಲೋಕೋಪಯೋಗಿ ಕಾರ್ಯಕಾರಿ ಅಭಿಯಂತರ ಕೆ.ದಯಾನಂದ, ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಸಾರ್ವಜನಿಕರು ಮೊದಲಾದವರು ಉಪಸ್ಥಿತರಿದ್ದರು.
       ಇದೂ ಗೊತ್ತಿರಲಿ:
    ಹಳೆಯ ಕಟ್ಟಡವನ್ನು ಸ್ಮಾರಕವಾಗಿಸುವ ಬಗ್ಗೆ ಯೋಚಿಸಲಾಗುವುದು: ಸಚಿವ
    ಶತಮಾನಗಳ ಹಿಂದಿನ ಮಂಜೇಶ್ವರ ಉಪನೋಂದಣಿ ಕಚೇರಿಯ ಹಳೆಯ ಕಟ್ಟಡವನ್ನು ಚಾರಿತ್ರಿಕ ಸ್ಮಾರಕ ಎಂಬ ರೂಪದಲ್ಲಿ ಸಂರಕ್ಷಿಸಬೇಕು ಎಂಬ ಬೇಡಿಕೆಯ ಬಗ್ಗೆ ಗಂಭೀರ ಆಲೋಚನೆ ನಡೆಸಲಾಗುವುದು ಎಂದು ಲೋಕೋಪಯೋಗಿ ಸಚಿವ ಜಿ.ಸುಧಾಕರನ್ ಭರವಸೆ ನೀಡಿದರು. ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಅವರು ಈ ಸಂಬಂಧ ಸಚಿವರಿಗೆ ಮನವಿ ಸಲ್ಲಿಸಿದ್ದರು. ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ ಹೆಸರಲ್ಲಿ ಐತಿಹಾಸಿಕ ಸ್ಮಾರಕ ನಿರ್ಮಾಣ ಬಗ್ಗೆ ಯೋಚಿಸಲಾಗುವುದು ಎಂದವರು ಈ ವೇಳೆ ನುಡಿದರು.
   ಇತಿಹಾಸದ ಪುಟ ಸೇರಿದ ಬ್ರಿಟಿಷ್ ರಿಂದ ನಿರ್ಮಿತ ಕಟ್ಟಡ:!
     ಮಂಜೇಶ್ವರ ಉಪನೋಂದಣಿ ಕಚೇರಿ ನೂತನ ಕಟ್ಟಡಕ್ಕೆ ಸ್ಥಾಳಾಂತರಗೊಂಡಿದ್ದು, ರಾಜ್ಯೋದಯಕ್ಕೆ ತುಂಬ ಮುನ್ನವೇ ಚಟುವಟಿಕೆ ಆರಂಭಿಸಿದ್ದ ಮಂಜೇಶ್ವರ ಉಪ ನೋಂದಣಿ ಕಚೇರಿ ಅಪೂರ್ವ ಸಾಧನೆಗಳನ್ನು ನಡೆಸಿದೆ. 1884 ಮೇ ತಿಂಗಳಿಂದ ಈ ಕಚೇರಿ ಚಟುವಟಿಕೆ ನಡೆಸಿಕೊಂಡು ಬಂದಿದೆ. ಬ್ರಿಟೀಷ್ ಆಡಳಿತೆ ಅವಧಿಯಲ್ಲಿ ವಿದೇಶಿ ನಿರ್ಮಾಣ ಶೈಲಿಯಲ್ಲಿ ಸಿದ್ಧವಾದ ಕಟ್ಟಡದಲ್ಲಿ 136 ವರ್ಷಗಳ ಕಾಲ ಈ ಕಚೇರಿ ಚಟುವಟಿಕೆ ನಡೆಸಿಕೊಂಡುಬಂದಿದೆ. ಎರಡು ಸಾಲು ಕಲ್ಲುಗಳಿಂದ ಕಟ್ಟಡಲಾದ ಗೋಡೆಯೊಂದಿಗೆ ನಿರ್ಮಿಸಲಾದ ಈ ಕಟ್ಟಡಕ್ಕೆ ಇಂದಿಗೂ ಹೇಳುವಂಥಾ ಯಾವುದೇ ಶಿಥಿಲತೆ ಬಂದಿಲ್ಲ. ಫ್ಯಾನ್ ಅನುಷ್ಠಾನಕ್ಕೆ ಬರುವ ಮುನ್ನ ಬಳಕೆಯಲ್ಲಿದ್ದ ತೂಗಿ ಹಾಕಲಾಗುವ ಬೀಸಣಿಕೆಗಾಗಿ ಬಳಸುವ ಕೊಂಡಿ ಇಂದಿಗೂ ಈ ಕಚೇರಿಯಲ್ಲಿದೆ. ಇಲ್ಲಿನ 98 ಸೆಂಟ್ಸ್ ಜಾಗದಲ್ಲಿ ಅನೇಕ ಔಷಧ ಸಸ್ಯಗಳನ್ನು ನೆಟ್ಟು ಬೆಳೆಸಲಾಗಿದೆ. ಜೊತೆಗೆ 98 ಸೆಂಟ್ಸ್ ಜಾಗ ಹೊಂದಿರುವ ರಾಜ್ಯದ ಅತ್ಯಪೂರ್ವ ನೋಂದಣಿ ಕಚೇರಿಗಳಲ್ಲಿ ಇದೂ ಒಂದು ಎಂಬುದೂ ಹೆಗ್ಗಳಿಕೆಯಾಗಿದೆ.
    ಕರ್ನಾಟಕ-ಕೇರಳ ರಾಜ್ಯಗಳ ಗಡಿಪ್ರದೇಶವಾಗಿರುವ ಇಲ್ಲಿ ಬಹುಭಾಷೆ ಬಳಕೆಯಲ್ಲಿದೆ. ಮೊದಲ ಹಂತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಭಾಗವಾಗಿದ್ದ ಇದು ಮಂಗಳೂರು ತಾಲೂಕಿಗೆ ಸೇರಿದ ಕಚೇರಿಯಾಗಿತ್ತು. ಕೈರಂಗಳ, ಕಿನ್ಯ, ಕೋಟೆಕ್ಕಾರು, ಮಂಜನಾಡಿ, ನರಿಂಗಾನ, ತಲಪ್ಪಾಡಿ  ಗ್ರಾಮಗಳ ಸಹಿತ 35 ಗ್ರಾಮಗಳು ಈ ಕಚೇರಿಯ ವ್ಯಾಪ್ತಿಯಲ್ಲಿದ್ದುವು. ಕೇರಳ ರಾಜ್ಯೋದಯವಾದ ಮೇಲೆ ಮಂಜೇಶ್ವರ, ಮಂಗಲ್ಪಾಡಿ, ಪೈವಳಿಕೆ, ಮೀಂಜ, ವರ್ಕಾಡಿ ಸಹಿತ 31 ಗ್ರಾಮಗಳು ಈ ಕಚೇರಿ ವ್ಯಾಪ್ತಿಯಲ್ಲಿವೆ. ಕನ್ನಡ, ಇಂಗ್ಲೀಷ್, ಮಲೆಯಾಳಂ ಭಾಷೆಗಳಲ್ಲಿ ಇಲ್ಲಿ ನೋಂದಣಿ ನಡೆಯುತ್ತಿದೆ.
     2019ರಲ್ಲಿ 4663 ಆಧಾರಗಳು ಇಲ್ಲಿ ನೋಂದಣಿಗೊಂಡಿವೆ. 8040 ವಸತಿ ಅರ್ಹತಾಪತ್ರಗಳು, 1910 ಆಧಾರ ನಕಲುಗಳು, 913 ಗಹಾನ್/ಗಹಾನ್ ರಿಲೀಸ್ ಗಳು ಕಳೆದ ವರ್ಷ ನೀಡಲಾಗಿದೆ. ಜೊತೆಗೆ 9 ನೋಂದಣಿ ವಾಹನಗಳು ದಾಖಲಾಗಿವೆ. ಈ ಕಚೇರಿಯ 2019ರ ಆದಾಯ 7,25,81,955 ರೂ. ಆಗಿತ್ತು.
      ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಜನರಿಗೆ ಸೇವೆ ಒದಗಿಸುವಲ್ಲಿ ಹಿಂದಿನ ಕಚೇರಿ ಸಾಲದೇ ಹೋದ ಹಿನ್ನೆಲೆಯಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದೆ. ಹಳೆಯ ಕಟ್ಟಡ ಬಳಿಯೇ ನೂತನ ಕಟ್ಟಡದ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಅಳವಡಿಸಿ 64.66 ಲಕ್ಷ ರೂ. ವೆಚ್ಚಮಾಡಲಾಗಿದೆ ಎಂದು ಉಪನೋಂದಣಿ ಅಧಿಕಾರಿ ರಾಬಿನ್ ಡಿಸೆಲ್ವ ತಿಳಿಸಿರುವರು.  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries