HEALTH TIPS

ಕೋವಿಡ್ ನೋವಿನ ಮಧ್ಯೆಯೂ ಸಾಂಪ್ರದಾಯಿಕ `ವಿಷು' ಆಚರಣೆ


       ಕಾಸರಗೋಡು/ಕುಂಬಳೆ/ಬದಿಯಡ್ಕ: ಐಶ್ವರ್ಯ, ಸಮೃದ್ಧಿಯ ಹಾಗೂ ಬಾಂಧವ್ಯವನ್ನು ಬೆಸೆಯುವ ವಿಷು ಹಬ್ಬವನ್ನು ನಾಡಿನಾದ್ಯಂತ ಸರಳವಾಗಿ ಮನೆ ಮನೆಗಳಲ್ಲಿ ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸಲಾಯಿತು.
       ಮಹಾಮಾರಿ ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜಾರಿಗೊಳಿಸಿದ ಲಾಕ್‍ಡೌನ್‍ನ ಕಾರಣ ದೇವಸ್ಥಾನಗಳಲ್ಲಿ, ಮಂದಿರಗಳಲ್ಲಿ ಉತ್ಸವಗಳಿಗೆ ಅವಕಾಶವಿಲ್ಲದಿರುವುದರಿಂದ ಮನೆ ಮನೆಗಳಲ್ಲಿ ವಿಷು ಹಬ್ಬವನ್ನು ಆಚರಿಸಿದರು. ಯಾವುದೇ ಸಂಭ್ರಮ, ಸಡಗರ ಇರಲಿಲ್ಲ. 
         ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುತ್ತಿದ್ದ `ವಿಷು ಕಣಿ' ಉತ್ಸವವನ್ನು(ವಾರ್ಷಿಕ ಜಾತ್ರೆ) ರದ್ದುಗೊಳಿಸಲಾಗಿತ್ತು. ವಿಷು ಅಂಗವಾಗಿ ಮನೆಗಳಲ್ಲೇ ವಿಶೇಷ ಪೂಜೆ, ಪುನಸ್ಕಾರ ನಡೆಯಿತು. ವಿಷು ಕಣಿ ಇರಿಸಲಾಯಿತು.
    ವಿಷು ಎಂದಾಕ್ಷಣ ನೆನಪಿಗೆ ಬರುವುದು ವಿಷು ಕಣಿ. ಹೊಸ ವರ್ಷದ ಬೆಳಗ್ಗೆ ಎದ್ದ ಕೂಡಲೇ ಸುವಸ್ತುಗಳನ್ನು ಮನೆಯ ಪೂಜಾ  ಕೊಠಡಿಯಲ್ಲಿ ಪೀಠವನ್ನಲಂಕರಿಸಿ ಅದರಲ್ಲಿ ದೇವರ ವಿಗ್ರಹ ಹಾಗೂ ದೀಪವನ್ನಿಡುತ್ತಾರೆ. ಪಕ್ಕದಲ್ಲಿ ರಂಗವಲ್ಲಿಯಿರಿಸಿ, ಅಕ್ಕಿ, ತೆಂಗಿನಕಾಯಿ, ಭತ್ತ, ವೀಳ್ಯದೆಲೆ, ಅಡಿಕೆ, ಕನ್ನಡಿ, ಅರಿಶಿನ, ಕುಂಕಮ, ಚಿನ್ನದ ಸರ, ಹಣ್ಣು ಹಂಪಲು, ತರಕಾರಿಗಳನ್ನಿರಿಸಿ ಬೆಳ್ಳಂಬೆಳಗ್ಗೆ ಕಣಿದರ್ಶನ ಪಡೆದರು. ಕಣಿಯಲ್ಲಿರುವ ತೆಂಗು ಸಂಪತ್ತಿನ ಚಿಹ್ನೆಯಾಗಿದ್ದರೆ, ಭತ್ತ ಬೆಳೆಯ ಸಂಕೇತ. ಫಲಪುಷ್ಪ, ತರಕಾರಿಗಳು ಏಳಿಗೆಯ ಪ್ರತೀಕವಾಗಿದೆ.
          ಕೊನ್ನೆ ಹೂ ವಿಶೇಷ : ವಿಷುವಿನ ಸಮಯದಲ್ಲಿ ಕಂಡು ಬರುವ ಕೊನ್ನೆ ಹೂವನ್ನು ಕಣಿಯಲ್ಲಿ ಅಲಂಕರಿಸಲಾಗುತ್ತದೆ. ಈ ಹೂ ಶ್ರೀಕೃಷ್ಣನ ಪ್ರೀತಿಯ ಸಂಕೇತವಾದ್ದರಿಂದ ಈ ಹೂವಿಗೆ ತುಂಬಾ ಬೇಡಿಕೆ. ಶ್ರೀಕೃಷ್ಣನು ಕೊನ್ನೆ ಹೂಗಳಿಂದ ಪಾದದ ಸರವನ್ನು ಮಾಡಿ ಆಡಿಕೊಂಡಿದ್ದನೆಂದು ಇದಕ್ಕೆ ವಿಷುಕಣಿಯಲ್ಲಿ ಪ್ರಾಧಾನ್ಯತೆ ಕಲ್ಪಿಸಲಾಗಿದೆ.
        ವಿಷು ದಕ್ಷಿಣೆ(ವಿಷು ಕೈನ್ನೀಟ್ಟಂ) : ವಿಷು ಕಣಿಯ ದರ್ಶನ ಮಾಡಿದ ಮೇಲೆ ಮನೆಯ ಕಿರಿಯರೆಲ್ಲಾ ಹಿರಿಯರ ಆಶೀರ್ವಾದ ಪಡೆದರು. ಆಶೀರ್ವಾದ ಪಡೆದ ಕಿರಿಯರಿಗೆ ಹಿರಿಯರು ನಾಣ್ಯವನ್ನು ನೀಡಿ ಹರಸಿದರು. ಇದಕ್ಕೆ ವಿಷು `ಕೈನೀಟ್ಟಂ' ಎಂದು ಹೆಸರು.
            (ಚಿತ್ರ ಮಾಹಿತಿ: (1)(2)ಮುಳಿಯಾರು ಶ್ರೀಸುಬ್ರಹ್ಮಣ್ಯ ದೇವಾಲಯದಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿರಿಸಲಾಗಿದ್ದ ವಿಷುಕಣಿ,
              3)(4)ಕಂಠಪ್ಪಾಡಿ ಶ್ರೀಸುಬ್ರಹ್ಮಣ್ಯ ದೇವಾಲಯದ ವಿಷು ಕಣಿ ಹಾಗೂ ಅಲಂಕೃತ ಶ್ರೀದೇವರು,
              5)(6)(7)ನೆಟ್ಟಣಿಗೆ ಗುತ್ತು ಪುಷ್ಪಾವತಿ ಅಮ್ಮ ಅವರ ಮನೆಯಲ್ಲಿ ರಚಿಸಲಾದ ವಿಷುಕಣಿ ಹಾಗೂ ಪುಷ್ಪಾವತಿ ಅಮ್ಮ ವಿಷುಕಣಿಯೊಂದಿಗೆ.
               8)ಕಾಸರಗೋಡು ಎಸ್ ವಿ ಟಿ ರಸ್ತೆಯ ಸಾಯಿಶ್ರೀ ನಿವಾಸದಲ್ಲಿ ಹಾಕಲಾದ ವಿಷು ಕಣಿ.)

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries