ಕೋಝಿಕ್ಕೋಡ್ : ಲಾಕ್‍ಡೌನ್ ಹಿನ್ನೆಲೆಯಲ್ಲಿ ಹಸಿವಿನಿಂದ ಕಂಗೆಟ್ಟಿದ್ದ ರಾಜ್ಯದ ಹಳ್ಳಿಯೊಂದರ ಯುವಕನ ದೂರಿಗೆ ಪ್ರಧಾನಿ ಕಾರ್ಯಾಲಯ ಕೆಲವೇ ತಾಸುಗಳಲ್ಲಿ ಸ್ಪಂದಿಸಿ ಆತನ ಮನೆಗೇ ಅಕ್ಕಿಯನ್ನು ತಲುಪಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕೋಝಿಕ್ಕೋಡ್ ಜಿಲ್ಲೆಯ ವಡಕರದ ಮಣಿಯೂರು ನಿವಾಸಿ ವೇಣುಗೋಪಾಲ್ ಮನೆಯಲ್ಲಿ ಅಕ್ಕಿ ಖಾಲಿಯಾಗಿತ್ತು. ದೂರವಾಣಿ ಮೂಲಕ ಸ್ಥಳೀಯ ಅಧಿಕಾರಿಗಳಿಗೆ, ರಾಜ್ಯದ ಮುಖ್ಯ ಕಾರ್ಯದರ್ಶಿ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವಾಲಯ ಹಾಗೂ ಬಳಿಕ ಮುಖ್ಯಮಂತ್ರಿಗೇ ಕರೆ ಮಾಡಿದರೂ ಸೂಕ್ತ ಸ್ಪಂದನೆ ದೊರಕಿರಲಿಲ್ಲ.
ಈ ಸಂದರ್ಭ ಬೇರೇನು ಮಾಡಬಹುದೆಂಬ ಚಿಂತನೆ ಮುಂದುವರಿದು ಪ್ರಧಾನಿ ಕಾರ್ಯಾಲಯಕ್ಕೆ ಕರೆ ಮಾಡಿದರು. ಅಹವಾಲನ್ನು ಆಲಿಸಿದ ಅಧಿಕಾರಿಗಳು ಈ ಹಿಂದೆ ರಾಜ್ಯದ ಅಧಿಕಾರಿಗಳು ಮತ್ತು ಸಚಿವರಿಗೆ ಕಳುಹಿಸಿದ ಇ-ಮೇಲ್‍ಗಳ ಪ್ರತಿ ಕಳುಹಿಸುವಂತೆ ಸೂಚಿಸಿದರು. ಅದರಂತೆ ಮಾ. 28 ರಂದು ಅಪರಾಹ್ನ 3ಕ್ಕೆ ಪ್ರಧಾನಿ ಕಾರ್ಯಾಲಯಕ್ಕೆ ದಾಖಲೆಗಳನ್ನೆಲ್ಲ ಕಳುಹಿಸಿದರು. ಸಂಜೆ 5ಕ್ಕೆ ರಾಜ್ಯಪಾಲರ ಕಚೇರಿ ಅಧಿಕಾರಿಗಳು ವೇಣುಗೋಪಾಲ್‍ಗೆ ಕರೆ ಮಾಡಿ ಅಕ್ಕಿ ಪೂರೈಸುವ ಭರವಸೆ ನೀಡಿದರು. ಸಂಜೆ 7ರ ವೇಳೆಗೆ ರೇಷನ್ ಅಂಗಡಿ ತೆರೆದ ಅಧಿಕಾರಿಗಳು ಮನೆಗೆ ಉಚಿತವಾಗಿ ಅಕ್ಕಿಯನ್ನು ಪೂರೈಸಿದರು.


