ಮಂಜೇಶ್ವರ: ಕೊರೊನಾ ಕಾರಣ ಹೇರಲ್ಪಟ್ಟ ಲಾಕ್ ಡೌನ್ ಜನಸಾಮಾನ್ಯರ ಜೀವನದ ಮೇಲೆ ಎಷ್ಟು ಪರಿಣಾಮ ಬೀರಿದೆಯೆಂದರೆ ನಗರ ಪ್ರದೇಶ ಮಾತ್ರವಲ್ಲಿ ಹಳ್ಳಿಗಳಲ್ಲೂ ಕರಾಳ ಛಾಯೆ ಬೀರಿದೆ. ಗ್ರಾಮೀಣ ಪ್ರದೇಶಗಳ ಕೃಷಿ ಬದುಕು ಖುಷಿ ಕಳಕೊಂಡು ವಿಲಪಿಸುತ್ತಿರುವುದು ನಿಧಾನವಾಗಿ ಕಳವಳಕ್ಕೆ ಕಾರಣವಾಗುತ್ತಿದೆ.
ಮೀಯಪದವಿನಲ್ಲಿ ಬೆಳೆಯಲಾದ ಹೇರಳ ರಂಬೂಟನ್ ಬೆಳೆ ಮಾರುಕಟ್ಟೆಗಳಿಲ್ಲದೆ ನೆಲಕಚ್ಚಿರುವುದರ ಜೊತೆಗೆ ಲಕ್ಷಾಂತರ ರೂ.ಗಳ ನಷ್ಟಕ್ಕೂ ಕಾರಣವಾಗಿದೆ.
ಬೇಸಿಗೆಯ ಈ ಏರುಹೊತ್ತಿನ ಸಂದರ್ಭವೆಂದರೆ ಅದು ಹಣ್ಣು-ಹಂಪಲುಗಳ ಧಾರಾಳ ಬೆಳೆ ಮತ್ತು ಕೊೈಲಿನ ಕಾಲ. ಆದರೆ ಮಾರುಕಟ್ಟೆ ಸಂಪೂರ್ಣ ಮುಚ್ಚಲ್ಪಟ್ಟಿರುವುದು, ಸಾಗಾಟಕ್ಕೆ ವಾಹನ ಸೌಕರ್ಯ ಇಲ್ಲದಿರುವುದರಿಂದ ರೈತರಿಗೆ ಭಾರೀ ನಷ್ಟ ಉಂಟಾಗಿದೆ. ಈಗಾಗಲೇ ಸುಮಾರು
20 ಟನ್‍ಗಳಲ್ಲಿ 10 ಟನ್‍ನಷ್ಟು ರಂಬೂಟನ್ ಫಲ ಕೊಯ್ಯಲು ಸಿದ್ಧವಾಗಿದೆ. ಆದರೆ ಮಾರುಕಟ್ಟೆಗೆ ಬೇಡಿಕೆ ಇಲ್ಲ. ಹಾಗಾಗಿ ಮಾರಾಟ ಮಾಡುವುದು ಯಾರಿಗೆ ಎಂಬ ಪ್ರಶ್ನೆ ಬೆಳೆಗಾರರನ್ನು ಆವರಿಸಿದೆ. ಹೀಗಾಗಿ ರಂಬೂಟನ್ ಕೊಯ್ಲು ಕೂಡ ಮುಂದಕ್ಕೆ ಹೋಗುತ್ತಿದೆ.
ಗಡಿನಾಡು ಕಾಸರಗೋಡು ಜಿಲ್ಲೆಯ ಪ್ರಗತಿಪರ ಕೃಷಿಕ ಡಾ.ಡಿ.ಸಿ.ಚೌಟರ ಹಣ್ಣಿನ ತೋಟದ ವ್ಯಥೆಯ ಕತೆ. ಈ ಬಾರಿಯ ಲಾಕ್ ಡೌನ್ ಅವಧಿ ಚೌಟರ ಹಣ್ಣುಹಂಪಲು ಫಸಲಿನ ಮಾರುಕಟ್ಟೆಗೆ ವಿಪರೀತ ಹೊಡೆತ ನೀಡಿದೆ. ಪ್ರತಿ ವರ್ಷ ಸುಮಾರು 20 ಟನ್‍ಗೂ ಅಧಿಕ ರಂಬೂಟನ್ ಬೆಳೆಯುತ್ತಾರೆ. ಕೇರಳ ಮಾತ್ರವಲ್ಲದೆ, ತಮಿಳ್ನಾಡು ಮತ್ತು ಕರ್ನಾಟಕದಲ್ಲಿ ಇದಕ್ಕೆ ಹೇರಳ ಮಾರುಕಟ್ಟೆ ಇದೆ. ಕಳೆದ ಬಾರಿ ಮಾರ್ಚ್‍ನಿಂದ ಜೂನ್ ತಿಂಗಳ ಅವಧಿಯಲ್ಲಿ ಉತ್ತಮ ಮಾರುಕಟ್ಟೆ ಗಳಿಸಿಕೊಂಡಿದ್ದರು. ಈ ಬಾರಿ ಇನ್ನೂ ರಂಬೂಟನ್ ಕೊಯ್ಯುವ ಧೈರ್ಯ ಮಾಡಿಲ್ಲ. ಸರಿಯಾದ
ಮಾರುಕಟ್ಟೆ ಸಿಗದೆ ಚೌಟರು ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.
ಶೇ.50ರಷ್ಟು ತಮಿಳ್ನಾಡಿಗೆ ಪೂರೈಕೆ:
ಕಳೆದ ಮೂರು ವರ್ಷಗಳಲ್ಲಿ ತಮಿಳ್ನಾಡು ಮಾರುಕಟ್ಟೆಗೆ ಶೇ.50ಕ್ಕಿಂತಲೂ ಅಧಿಕ ರಂಬೂಟನ್ ಮಾರಾಟ ಮಾಡುತ್ತಿದ್ದರು. ಉಳಿದ ಶೇ.30 ಕೇರಳ ಹಾಗೂ ಶೇ.20ರಷ್ಟು ಕರ್ನಾಟಕಕ್ಕೆ ಮಾರಾಟವಾಗುತ್ತಿತ್ತು. ಪ್ರಸಕ್ತ ತಮಿಳ್ನಾಡು ಕೊರೋನಾ ಸೋಂಕಿನಿಂದ ತತ್ತರಿಸುತ್ತಿದೆ. ಹಾಗಾಗಿ ಅಲ್ಲಿ ರಂಬೂಟನ್‍ಗೆ ಬೇಡಿಕೆ ಇಲ್ಲ. ಲಾಕ್ ಡೌನ್ ಸಡಿಲಗೊಂಡು ಹಣ್ಣುಹಂಪಲು ಮಾರಾಟಕ್ಕೆ ಅವಕಾಶ ಇದ್ದರೂ ಚೌಟರ ಹಣ್ಣುಹಂಪಲು ಉದ್ಯಮಕ್ಕೆ ಪ್ರಯೋಜನವಾಗಿಲ್ಲ. ಸಾಕಷ್ಟು ಬೇಡಿಕೆ ಬಾರದೆ ಈಗಲೇ ಕೊಯ್ಯುವುದು ಬೇಡ ಎಂಬ ತೀರ್ಮಾನಕ್ಕೆ ಚೌಟರು ಬಂದಿದ್ದಾರೆ. ಈ ಬಾರಿ ರಂಬೂಟನ್ ಫಲ ನೀಡುವುದು ತುಸು ವಿಳಂಬವಾಗಿರುವುದು ಚೌಟರ ಪಾಲಿಗೆ ವರವಾಗಿದೆ. ಆದರೆ ಮಾರುಕಟ್ಟೆ ಇಲ್ಲದೆ ಕಂಗಾಲಾಗುವ ಪರಿಸ್ಥಿತಿ ಬಂದಿದೆ. ಚೌಟರ ಐದು ಎಕರೆ ತೆಂಗಿನ ತೋಟದ ಮಧ್ಯೆ 500 ಗಿಡಗಳಲ್ಲಿ ರಂಬೂಟನ್ ಬೆಳೆಯುತ್ತಾರೆ. ಉಳಿದ ಎರಡು ಎಕರೆ ಪೂರ್ತಿ ರಂಬೂಟನ್ ಕೃಷಿ ಇದೆ. ಬೆಳಗ್ಗೆ 6 ಗಂಟೆಗೆ ಕೊಯ್ಯಲು ಶುರು ಮಾಡಿದರೆ 10 ಗಂಟೆಗೆ ಮುಗಿಸುತ್ತಾರೆ. ನಂತರ ಹಣ್ಣನ್ನು ಮಾರಾಟಕ್ಕೆ ಪ್ಯಾಕ್ ಮಾಡಿ ಸಜ್ಜುಗೊಳಿಸಲಾಗುತ್ತದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ಕಿಲೋ ರಂಬೂಟನ್‍ಗೆ 350 ರು. ಇದೆ. 1 ಕಿಲೋಗೆ 25ರಷ್ಟು ರಂಬೂಟನ್ ಹಣ್ಣು ತೂಗುತ್ತದೆ. ಗರಿಷ್ಠ ಪ್ರಮಾಣದ ಪೆÇ್ರಟಿನ್ ಅಂಶ ಇರುವ ರಂಬೂಟನ್‍ನಲ್ಲಿ ರೋಗನಿರೋಧಕ ಶಕ್ತಿ ಇದೆ ಎಂಬುದನ್ನು ವೈದ್ಯಕೀಯ ತಜ್ಞರು ಹೇಳುತ್ತಾರೆ. ಆದ್ದರಿಂದ ರಂಬೂಟನ್‍ಗೆ ಸಾಕಷ್ಟು ರಫ್ತು ಬೇಡಿಕೆಯೂ ಇದೆ. ಕೇರಳದಲ್ಲಿ ರಂಬೂಟನ್‍ನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿಲ್ಲ, ಆದರೆ ನೂರಕ್ಕೂ ಅಧಿಕ ರಂಬೂಟನ್ ಕೃಷಿಕರು ಇದ್ದಾರೆ ಎನ್ನುತ್ತಾರೆ ಡಾ.ಡಿ.ಸಿ.ಚೌಟ. ಹೆಚ್ಚಿನ ಮಾಹಿತಿಗೆ ಮೊ.ಸಂ.(09447193984) ಸಂಪರ್ಕಿಸಬಹುದು.
ಹತ್ತುಹಲವು ಕೃಷಿಗಳ ಸಾಧಕ:
ಡಾ.ಡಿ.ಸಿ.ಚೌಟ ಅವರು ಹತ್ತು ಹಲವು ಕೃಷಿಗಳ ಸಾಧಕ, ಪ್ರಯೋಗಶೀಲ. ಇವರ ಕೃಷಿ ತೋಟದಲ್ಲಿ ರಂಬೂಟನ್ ಫಲಕ್ಕೆ ಪ್ರಮುಖ ಸ್ಥಾನ, ನಂತರ ಮ್ಯಾಂಗಸ್ಟಿನ್ ಬೆಳೆಯುತ್ತಾರೆ. ಇದಲ್ಲದೆ ಬಟರ್-ಫ್ರುಟ್ ಕೂಡ ಬೆಳೆಸುತ್ತಾರೆ. ಇದನ್ನು ಸ್ಥಳೀಯವಾಗಿ ಮಾರಾಟ ಮಾಡುತ್ತಾರೆ. ವಿವಿಧ ಬಗೆಯ ಮಾವು ಕೂಡ ಬೆಳೆಸುತ್ತಾರೆ. ಮಾರ್ಚ್ ಬಂದರೆ ಡಾ.ಚೌಟರಿಗೆ ಪುರುಸೋತ್ತೇ ಇಲ್ಲ. ಒಂದು ಕಡೆ ರಂಬುಟಾನ್, ಇನ್ನೊಂದು ಕಡೆ ಮ್ಯಾಂಗಸ್ಟಿನ್ ಕೊಯ್ಯುವ ಬ್ಯೂಸಿ. ಈ ವರ್ಷ ಮಾತ್ರ ರಂಬೂಟನ್ ಕೊಯ್ಲನ್ನು ಕೊರೋನಾ ದೂರ ಮಾಡಿದೆ.
ಅಭಿಮತ:
ಈ ಬಾರಿ ಒಂದು ತಿಂಗಳು ತಡವಾಗಿ ರಂಬೂಟನ್ ಕೊಯ್ಲು ಮಾಡಬೇಕಷ್ಟೆ. ಆದರೆ ಮಾರುಕಟ್ಟೆ ಇನ್ನೂ ಸಿಕ್ಕಿಲ್ಲ. ಕೊರೋನಾ ಸಂಕಷ್ಟದಿಂದಾಗಿ ರಂಬೂಟನ್‍ಗೆ ಬೇಡಿಕೆ ಕುದುರುತ್ತಿಲ್ಲ. ಯಾವುದಕ್ಕೂ ಕಾದು ನೋಡಬೇಕಾಗಿದೆ.
-ಡಾ.ಡಿ.ಸಿ.ಚೌಟ, ಪ್ರಗತಿಪರ ಕೃಷಿಕ, ಮೀಯಪದವು.


