ಕಾಸರಗೋಡು: ಕರೊನಾ ಆಸ್ಪತ್ರೆಯಾಗಿ ಬದಲಾವಣೆಯಾಗಿದ್ದ ಕಾಸರಗೋಡು ಜನರಲ್ ಆಸ್ಪತ್ರೆ ಈ ಹಿಂದಿನಂತೆ ಸಾಮಾನ್ಯ ಆಸ್ಪತ್ರೆಯಾಗಿ ತನ್ನ ಚಟುವಟಿಕೆ ಆರಂಭಿಸಿದೆ. ಮಂಗಳವಾರ ಹೆರಿಗೆ, ಶಿಶು ರೋಗ ವಿಭಾಗ, ಎಲುಬು ರೋಗ ವಿಭಾಗಗಳ ಒ.ಪಿ.ಗಳು, ತುರ್ತು ಚಿಕಿತ್ಸಾ ವಿಭಾಗ ಚಟುವಟಿಕೆ ಆರಂಭಿಸಿದೆ. ಆಸ್ಪತ್ರೆ ಕಟ್ಟಡದ ಮೊದಲ ಅಂತಸ್ತಿನ ಲೇಬರ್ ವಾರ್ಡ್ ಮತ್ತು ಲೇಬರ್ ರೂಂ ನಲ್ಲಿ ದುರಸ್ತಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಎರಡನೇ ಅಂತಸ್ತಿನಲ್ಲಿ ಲೇಬರ್ ರೂಂ ಸಜ್ಜುಗೊಳಿಸಲಾಗಿದೆ. ಸೋಮವಾರ 4 ಸಿಸೇರಿಯನ್, ಒಂದು ಸಾಮಾನ್ಯ ಹೆರಿಗೆಗಳು ಇಲ್ಲಿ ನಡೆದಿವೆ. 22 ಮಂದಿಯನ್ನು ಇಲ್ಲಿ ಹೊಸದಾಗಿ ದಾಖಲಿಸಲಾಗಿದೆ.
ಹಿಂದಿನ ದಿನ 04994222999,9188125794 ಎಂಬ ನಂಬ್ರಗಳಿಗೆ ಕರೆಮಾಡಿದರೆ ಮಧ್ಯಾಹ್ನ 2ಗಂಟೆಯಿಂದ ಮರುದಿನದ ಸಂದರ್ಶನದ ಸಮಯ ನಿಗದಿ ಪಡಿಸಿ ಟೋಕನ್ ನೀಡಲಾಗುವುದು. ನಿಗದಿ ಪಡಿಸಿದ ಸಮಯದಲ್ಲಿ ಮಾತ್ರ ಪ್ರಧಾನ ಕಟ್ಟಡಕ್ಕೆ ರೋಗಿಗೆ ಪ್ರವೇಶಾತಿ ನೀಡಲಾಗುವುದು. ರೋಗಿಯ ಜತೆಗೆ ಒಬ್ಬರಿಗೆ ಮಾತ್ರ ಇರಲು ಅವಕಾಶವಿದೆ. ಕೋವಿಡ್ ಪ್ರತಿರೋಧದ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಜನ ಸಹಕರಿಸಬೇಕು ಎಂದು ಆಸ್ಪತ್ರೆ ವರಿಷ್ಠಾಧಿಕಾರಿ ಮನವಿಮಾಡಿದ್ದಾರೆ.

