ಕಾಸರಗೋಡು: ಜಗತ್ತು ಮಾತೃ ದಿನ ಕೊಂಡಾಡಿದ ವೇಳೆ ಕಾಸರಗೋಡು ಜಿಲ್ಲೆಯಲ್ಲಿ ಐ.ಸಿ.ಡಿ.ಎಸ್. ಕಚೇರಿಗೆ ಇದು ಧನ್ಯತೆಯ ಕ್ಷಣ.
ಐ.ಸಿ.ಡಿ.ಎಸ್. ಕಚೇರಿಯ ಸಹಕಾರದೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ ಮಂಜೇಶ್ವರದ ಸೈನಬಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಗರ್ಭಣಿಯಾಗಿದ್ದಂದಿನಿಂದ ಸೈನಬಾ ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಲಾಕ್ ಡೌನ್ ಆದೇಶ ಜಾರಿಗೊಂಡ ವೇಳೆ ಆದಾಯ ಮೊಟಕುಗೊಂಡು ಖಾಸಗಿ ಆಸ್ಪತ್ರೆಯ ಚಿಕಿತ್ಸೆಗೆ ಗತ್ಯಂತರವಿಲ್ಲದಂತಾಗಿತ್ತು. ಈ ಪರಿಸ್ಥಿತಿಯಲ್ಲೇ ನೋವು ಕಾಣಿಸಿಕೊಂಡಿದ್ದು, ಕಾಂಞಂಗಾಡಿನ ಜಿಲ್ಲಾ ಆಸ್ಪತ್ರೆಗೆ ಆಗಮಿಸಿದ ಇವರು ಸ್ಕ್ಯಾನಿಂಗ್‍ಗೆ ಒಳಗಾದಾಗ ಮಗುವಿಗೆ ಕರುಳಬಳ್ಳಿ ಸುತ್ತಿಕೊಂಡಿರುವ ಆಘಾತಕರ ವಿಚಾರ ಬೆಳಕಿಗೆ ಬಂದಿತ್ತು. ನಂತರ ಪರಿಯಾರಂ ವೈದ್ಯಕೀಯ ಕಾಲೇಜಿಗೆ ದಾಖಲಾದ ಇವರ ಬಳಿಯಿದ್ದ ಹಣವೆಲ್ಲ ಖರ್ಚಾಗಿತ್ತು.
ಈ ಹಂತದಲ್ಲಿ ಮಂಜೇಶ್ವರದ ಇವರ ಪ್ರದೇಶದ ಅಂಗನವಾಡಿ ಕಾರ್ಯಕರ್ತೆ ಪ್ರೇಮಾ ಅವರು ನಡೆಸಿದ ಯತ್ನ ಇವರಿಗೆ ಬೆಳಕಾಯಿತು. ಮಂಜೇಶ್ವರ ಐ.ಸಿ.ಡಿ.ಎಸ್. ಸೈಕೋ ಸೋಷ್ಯಲ್ ಕೌನ್ಸಿಲರ್ ಟಾಲ್ಸಿ ಟೋಂ ಅವರು ಕಾಂಞಂಗಾಡಿನ
ಎನ್.ಎಚ್.ಎಂ. ಗೆ ಕರೆಮಾಡಿ ಸರಕಾರಿ ಆಸ್ಪತ್ರೆಗಳಲ್ಲಿ ಗರ್ಭಿಣಿಯರಿಗೆ ಜೆ.ಎಸ್.ಎಸ್.ಕೆ. ಯೋಜನೆಯಲ್ಲಿ ಉಚಿತ ಚಿಕಿತ್ಸೆ ಸೌಲಭ್ಯ ಒದಗುವಂತೆ ಮಾಡಿದ್ದರು. ನಂತರ ನಡೆದ ಪರಿಣತ ಚಿಕಿತ್ಸೆಯಿಂದ ಹೆರಿಗೆಯೂ ನಡೆದು ತಾಯಿ-ಮಗು ಈಗ ಸುರಕ್ಷಿತರಾಗಿದ್ದಾರೆ.
ನಂತರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ವೇಳೆ ಅಳಿದುಳಿದ ಬಿಲ್ ರೂಪದಲ್ಲಿ 3400 ರೂ. ಲಭಿಸಿದ್ದು ಮತ್ತು ಊರಿಗೆ ಮರಳಲು ಆ್ಯಂಬುಲೆನ್ಸ್‍ನ ಅಗತ್ಯವಿದ್ದು, ಕಾಸರಗೋಡು ಐ.ಸಿ.ಡಿ.ಎಸ್. ಜಿಲ್ಲಾ ಪೆÇ್ರೀಗ್ರಾಂ ಆಫೀಸರ್ ಕವಿತಾರಾಣಿ ಅವರ ನೇತೃತ್ವದಲ್ಲಿ ಕಾಂಞಂಗಾಡಿನ ರಾಜಿ ಚಾಕೋ ಅವರು ಪ್ರಾಯೋಜಕ್ವ ನೀಡಿ ಈ ವ್ಯವಸ್ಥೆ ನಡೆಸಿಕೊಟ್ಟಿದ್ದರು.
ಸಂದರ್ಭೋಚಿತವಾಗಿ ಐ.ಸಿ.ಡಿ.ಎಸ್. ಕಚೇರಿ ಸಿಬ್ಬಂದಿ ನಡೆಸಿದ ಯತ್ನದ ಫಲವಾಗಿ ಇಂದು ತಾಯಿ-ಮಗು ಸುರಕ್ಷಿತರಾಗಿ ಮನೆ ಸೇರುವಂತಾಗಿದೆ.

