ಉಪ್ಪಳ: ಭಾಷಾವಾರು ರಾಜ್ಯ ವಿಂಗಡಣೆಯ ತರುವಾಯ ಕರ್ನಾಟಕದ ಭಾಗವಾಗಿದ್ದ ಕಾಸರಗೋಡು ಜಿಲ್ಲೆ ಕೇರಳ ರಾಜ್ಯದ ಪಾಲಾದ ಬಳಿಕ ಕಾಸರಗೋಡಿನ ಗಡಿನಾಡ ಕನ್ನಡಿಗರು ಅನುಭವಿಸುವ ಮಲತಾಯಿ ಧೋರಣೆಯ ವ್ಯಾಪಕ ಸಂಕಷ್ಟದ ಮಧ್ಯೆ ಐತಿಹಾಸಿಕವಾಗಿ ಕೇರಳ ರಾಜ್ಯ ಸರ್ಕಾರ ಬುಧವಾರ ಹೊರಡಿಸಿರುವ ಅಧಿಕೃತ ಆದೇಶವೊಂದರಲ್ಲಿ ಮಂಜೇಶ್ವರ ತಾಲೂಕನ್ನು ಭಾಷಾ ಅಲ್ಪಸಂಖ್ಯಾತ ತಾಲೂಕಾಗಿ ಪರಿಗಣಿಸಿ ಘೋಷಣೆ ಹೊರಡಿಸಿದ್ದು ಕನ್ನಡಿಗರ ಪಾಲಿಗೆ ಭಾರೀ ಭರವಸೆಯ ಬಾಗಿಲು ತೆರೆದುಕೊಂಡಿದೆ.
ಕಾಸರಗೋಡು ತಾಲೂಕಿನ ಭಾಗವಾಗಿದ್ದ ಮಂಜೇಶ್ವರವನ್ನು 2013 ರಲ್ಲಿ ವಿಭಜಿಸಿ ಮಂಜೇಶ್ವರ ತಾಲೂಕಿಗೆ ರೂಪು ನೀಡಲಾಗಿತ್ತು. ವರ್ಕಾಡಿ, ಮೀಂಜ, ಮಂಜೇಶ್ವರ, ಪೈವಳಿಕೆ, ಮಂಗಲ್ಪಾಡಿ, ಎಣ್ಮಕಜೆ, ಕುಂಬಳೆ, ಪುತ್ತಿಗೆ ಗ್ರಾ.ಪಂ.ಗಳು ಮಂಜೇಶ್ವರ ತಾಲೂಕು ವ್ಯಾಪ್ತಿಗೆ ಸೇರಿದವುಗಳಾಗಿದ್ದು, ಬಹುಸಂಖ್ಯಾತ ಕನ್ನಡಿಗರಿರುವ ಗಡಿ ಗ್ರಾಮಗಳ ಅತ್ಯಂತ ಹಿಂದುಳಿದ ತಾಲೂಕಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡಿಗರಿಗೆ ವಿಶೇಷ ಆದ್ಯತೆಗಳನ್ನು ನೀಡಿ ಅಲ್ಪಸಂಖ್ಯಾತ ತಾಲೂಕು ಆಗಿ ಘೋಶಿಸಬೇಕೆಂದು 2015 ರಲ್ಲಿ ಕರ್ನಾಟಕ ಸಮಿತಿಯ ಮುಖಂಡ ನ್ಯಾಯವಾದಿ ಮುರಳೀಧರ ಬಳ್ಳುಕ್ಕುರಾಯರು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಮೊತ್ತಮೊದಲ ಬಾರಿಗೆ ಒತ್ತಾಯಿಸಿದ್ದರು. ಆ ಬಳಿಕ ಕಸಾಪ ಗಡಿನಾಡ ಘಟಕದ ನೇತೃತ್ವದಲ್ಲೂ ಈ ಬಗ್ಗೆ ಮನವಿ ಸಲ್ಲಿಸಲಾಗಿತ್ತು. ಬಳಿಕ 2018ರಲ್ಲಿ ಕನ್ನಡ ಹೋರಾಟ ಸಮಿತಿಯ ನೇತೃತ್ವದಲ್ಲಿ ಸಲ್ಲಿಸಿದ ಮನವಿಯ ಬಗ್ಗೆ ನಿರಂತರ ಒತ್ತಡ್ಗಳನ್ನು ತರುವ ಮೂಲಕ ಇದೀಗ ಅಧಿಕೃತವಾಗಿ ಸರ್ಕಾರದಿಂದ ಇಂತಹ ಆದೇಶ ನೀಡುವಲ್ಲಿ ಸಾಫಲ್ಯತೆ ಕಂಡುಕೊಳ್ಳಲಾಗಿದೆ.
ಏನೇನು ಲಾಭ:
ಮಂಜೇಶ್ವರವು ಭಾಷಾ ಅಲ್ಪಸಂಖ್ಯಾತ ತಾಲೂಕೆಂದು ಘೋಷಣೆಯಾಗಿರುವುದರಿಂದ ಸರ್ಕಾರಿ ಕಾರ್ಯಾಲಯಗಳ ಉದ್ಯೋಗದಲ್ಲಿ ಮೊದಲ ಆದ್ಯತೆ ಕನ್ನಡಿಗರಿಗೇ ಲಭ್ಯವಾಗಲಿದೆ. ಅಲ್ಲದೆ ವಿವಿಧ ಕಾರ್ಯಾಲಯಗಳಲ್ಲಿ ಕೆಳ ದರ್ಜೆಯ ನೌಕರ(ಎಲ್ ಡಿ ಕ್ಲರ್ಕ್) ಹುದ್ದೆಗೆ ಕನ್ನಡಿಗರನ್ನು ನೇಮಿಸಬೇಕು. ಸರ್ಕಾರದ ಆದೇಶಗಳನ್ನು ಕನ್ನಡದಲ್ಲಿ ಪ್ರಕಟಿಸಬೇಕು ಮತ್ತು ಜನಸಾಮಾನ್ಯರು ಕನ್ನಡದಲ್ಲೇ ವ್ಯವಹರಿಸಬಹುದಾಗಿದ್ದು, ಸರ್ಕಾರ ಕನ್ನಡದಲ್ಲೇ ಉತ್ತರಿಸಬೇಕಾದ ಕರ್ತವ್ಯ ಹೊಂದಿರುತ್ತದೆ. ವಿವಿಧ ನಾಮ ಫಲಕಗಳನ್ನು ಕನ್ನಡದಲ್ಲೇ ಪ್ರಕಟಿಸಬೇಕಾಗುತ್ತದೆ.
ಕನ್ನಡಿಗರ ಮೊಗದಲ್ಲಿ ಮಂದಹಾಸ!
ಸರ್ಕಾರದ ಭಾಷಾ ಅಲ್ಪಸಂಖ್ಯಾತ ತಾಲೂಕು ಘೋಷಣೆಯು ಮಂಜೇಶ್ವರ ತಾಲೂಕು ವ್ಯಾಪ್ತಿಯಲ್ಲಿ ಕನ್ನಡಿಗರ ಮಂದಹಾಸಕ್ಕೆ ಕಾರಣವಾಗಿದೆ. ಹಲವು ವರ್ಷಗಳ ಬೇಡಿಕೆ ಈ ಮೂಲಕ ಸಾಫಲ್ಯಗೊಂಡಿರುವುದು ಜನಸಾಮಾನ್ಯರಿಗೆ ತೃಪ್ತಿಪಡಿಸುವ ಸೂಚನೆಯಾಗಿದೆ. ಇತ್ತೀಚೆಗಿನ ಕೆಲವು ವರ್ಷಗಳಲ್ಲಿ ಮಂಜೇಶ್ವರ ತಾಲೂಕು ಸಹಿತ ಜಿಲ್ಲೆಯ ಹಲವು ಕನ್ನಡ ಮಾಧ್ಯಮ ಶಾಲೆಗಳ ಕೆಲವು ಪಠ್ಯ ಬೋಧನೆಗಳಿಗೆ ಕನ್ನಡ ಬಾರದ ಮಲೆಯಾಳಿ ಶಿಕ್ಷಕರನ್ನು ನೇಮಿಸುವ ಮೂಲಕ ಜನಾಕ್ರೋಶಕ್ಕೆ ಕಾರಣವಾಗಿ ಹೋರಾಟ-ಪ್ರತಿಭಟನೆಗಳಿಗೆ ಕಾರಣವಾಗಿತ್ತು. ಆದರೆ ಸರ್ಕಾರದ ನೂತನ ಮಾನ್ಯತಾ ಆದೇಶದಿಂದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಪಾಲಿಗೆ ಆತಂಕ ರಹಿತ ನೂತನ ಶಖೆಯೊಂದು ಆರಂಭಗೊಳ್ಳುವ ಭರವಸೆ ಮೂಡಿಸಿದೆ.
ಅಭಿಮತ:
ತಾಲೂಕಿನ ಬಹುಸಂಖ್ಯಾತ ಕನ್ನಡಿಗರಿಗೆ ಲಭ್ಯವಾದ ಇಂತಹ ಆದೇಶ ತೃಪ್ತಿ ತಂದಿದೆ. ಇಂತಹ ಒಂದು ಆದೇಶಕ್ಕಾಗಿ ಮಾಡಿದ ಅಹರ್ನಿಶಿ ಪ್ರಯತ್ನಗಳಿಗೆ ಸರ್ಕಾರ ಮಾನ್ಯತೆ ನೀಡಿರುವುದಕ್ಕೆ ಅಭಿನಂದನೆ. ತಾಲೂಕು ವ್ಯಾಪ್ತಿಯ ಕನ್ನಡಿಗರು ಸರ್ಕಾರ ಒದಗಿಸಿರುವ ಅವಕಾಶವನ್ನು ಸಮರ್ಪಕವಾಗಿ, ಸಮರ್ಥವಾಗಿ ಬಳಸುವ ಮೂಲಕ ಕನ್ನಡ ಭಾಷೆ, ಸಂಸ್ಕøತಿ ಸಂವರ್ಧನೆಗೆ ಪ್ರೋತ್ಸಾಹ ನೀಡಿ ಬಲತುಂಬಬೇಕು. ಒಗ್ಗಟ್ಟಿನ ಹೋರಾಟ, ಬೇಡಿಕೆಗಳು ಸಫಲವಾಗುತ್ತದೆ.
ನ್ಯಾಯವಾದಿ ಮುರಳೀಧರ ಬಳ್ಳುಕ್ಕುರಾಯ
ಹೋರಾಟ ಸಮಿತಿ ಅಧ್ಯಕ್ಷ, ಸರ್ಕಾರಕ್ಕೆ ಮೊದಲು ಅರ್ಜಿಸಲ್ಲಿಸಿದವರು.




