ಕುಂಬಳೆ: ಇತ್ತೀಚೆಗೆ ಮಹಾರಾಷ್ಟ್ರದ ರೈಲು ಹಳಿಯೊಂದರಲ್ಲಿ ಮಲಗಿದ್ದ ಅನ್ಯರಾಜ್ಯ ಕಾರ್ಮಿಕರು ಸಾಗಿಬಂದ ಗೂಡ್ಸ್ ರೈಲಿನಡಿಗೆ ಸಿಲುಕಿ ದಾರುಣರಾಗಿ ಮೃತಪಟ್ಟ ಘಟನೆಯ ಬೆನ್ನಿಗೇ ಇದೀಗ ರೈಲು ಸಂಚಾರವನ್ನು ಪುನರ್ ಆರಂಭಿಸುವುದಾಗಿ ಕೇಂದ್ರ ಸರ್ಕಾರ ಘೋಶಿಸುತ್ತಿರುವಂತೆ ಎಲ್ಲೆಡೆ ಆತಂಕಗಳು ಶುರುವಾಗಿದೆ. ಕಾರಣ ಹಲವು ಪ್ರದೇಶಗಳಲ್ಲಿ ಈಗಲೂ ಅನ್ಯರಾಜ್ಯ ಕಾರ್ಮಿಕರು ರೈಲು ಹಳಿಗಳ ಮೂಲಕ ಸಂಚರಿಸುತ್ತಿರುವುದು ಕಂಡುಬರುತ್ತಿದ್ದು ಅಪಘಾತದ ಭಯ ಉಂಟುಮಾಡಿದೆ.
ಲಾಕ್ ಡೌನ್ ಆರಂಭಗೊಂಡ ಬಳಿಕ ಎಲ್ಲೆಡೆ ವಾಹನ ಸಂಚಾರ ಮೊಟಕುಗೊಂಡಿರುವುದರ ಪರಿಣಾಮ ವಿವಿಧ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಅನ್ಯರಾಜ್ಯ ಕೂಲಿ ಕಾರ್ಮಿಕರು ಸಂಕಷ್ಟಕ್ಕೊಳಗಾಗಿದ್ದಾರೆ. ಹೊಟ್ಟೆಹೊರೆಯಲು, ಒಂದು ತುತ್ತಿನ ಅನ್ನಕ್ಕಾಗಿ ಹುಟ್ಟೂರಿನಿಂದ ಬಹುದೂರದಲ್ಲಿ ಕೂಲಿ ನಿರ್ವಹಿಸುವ ಸಾವಿರಾರು ಜನರು ಲಾಕ್ ಡೌನ್ ಕಾರಣ ವಸತಿ, ಆಹಾರ ಇಲ್ಲದೆ, ಊರಿಗೆ ಮರಳಲು ಆಗದೆ ಪರಿತಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಲಾಕ್ ಡೌನ್ ಎರಡನೇ ಅವಧಿಯ ಬಳಿಕ ಅನ್ಯರಾಜ್ಯ ಕಾರ್ಮಿಕರು ತಮ್ಮ ತಮ್ಮ ಊರಿಗೆ ತೆರಳಲು ಗತ್ಯಂತರವಿಲ್ಲದೆ ಪರಿತಪಿಸುತ್ತಿದ್ದು, ಬಹುತೇಕರು ನಡೆದು ಸಾಗುತ್ತಿರುವುದು ವರದಿಯಾಗುತ್ತಿದೆ. ಹೀಗೆ ನಡೆದು ಸಾಗುತ್ತಿರುವವರನ್ನು ಪೋಲೀಸರು ಅಲ್ಲಲ್ಲಿ ತಡೆಹಿಡಿದು ಮರಳಿ ಬಂದಲ್ಲಿಗೇ ಕಳಿಸುತ್ತಿದ್ದಾರೆ.
ಈ ಮಧ್ಯೆ ಕಾಸರಗೋಡು, ಕಣ್ಣೂರು ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುವ ಹಲವಾರು ಜನರು ರೈಲ್ವೇ ಹಳಿಗಳ ಮೂಲಕ ಸಾಗುತ್ತಿರುವುದು ಇತ್ತೀಚೆಗೆ ಸಾಮಾನ್ಯವಾಗಿ ಕಂಡುಬರುತ್ತಿದೆ. ತಂಡ-ತಂಡವಾಗಿ ರೈಲು ಹಳಿಗಳ ಮೂಲಕ ಯಾವ ಅಡೆತಡೆಗಳೂ ಇಲ್ಲದೆ ಸಂಚರಿಸುವ ಅವರನ್ನು ತಡೆದು ನಿಲ್ಲಿಸುವ ವ್ಯವಸ್ಥೆಗಳೂ ಇಲ್ಲವಾಗಿದೆ.
ಉತ್ತರ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶಗಳ ಕಾರ್ಮಿಕರು ಕುಂಬಳೆ, ಉಪ್ಪಳ, ಮಂಜೇಶ್ವರ ರೈಲು ಹಳಿಗಳ ಮೂಲಕ ಸಾಗುತ್ತಿರುವುದು ನಿತ್ಯ ದೊಡ್ಡ ಸಂಖ್ಯೆಯಲ್ಲಿ ಕಂಡುಬರುತ್ತಿದ್ದು ಆತಂಕ ಮೂಡಿಸಿದೆ. ಇದೀಗ ರೈಲು ಸಂಚಾರ ಆರಂಭಿಸುವ ಬಗ್ಗೆ ಕೇಂದ್ರ ಸರ್ಕಾರ ಪ್ರಕಟಣೆ ಹೊರಡಿಸಿರುವುದರ ಹಿನ್ನೆಲೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ರೈಲು ಹಳಿಗಳ ಮೂಲಕ ಸಂಚರಿಸುವುದು ಇನ್ನಷ್ಟು ಅಪಾಯಗಳಿಗೆ ಕಾರಣವಾಗುವ ಭಯ ಹುಟ್ಟಿಸಿದೆ.
ಜೊತೆಗೆ ಕಾಸರಗೋಡಿನಿಂದ ಕರ್ನಾಟಕ ಗಡಿಗಳನ್ನು ಹೊಂದಿರುವ ಗಡಿಗಳ ಪೈಕಿ ಒಳ ಗ್ರಾಮಗಳ 8 ಕೇಂದ್ರಗಳ ಮೂಲಕ ರಹಸ್ಯವಾಗಿಯೂ ಜನ ಸಂಚಾರ ನಡೆಯುತ್ತಿರುವುದಾಗಿ ತಿಳಿದುಬಂದಿದೆ. ಅಲ್ಲದೆ ಜನರನ್ನು ಇಂತಹ ರಹಸ್ಯ ಮಾರ್ಗಗಳ ಮೂಲಕ ಅತ್ತಿಂದ ಇತ್ತ-ಇತ್ತಿನಿಂದತ್ತ ಕರೆದೊಯ್ಯಲು ಕೆಲವು ಏಜೆನ್ಸಿಗಳೂ ಕಾರ್ಯನಿರ್ವಹಿಸುತ್ತಿರುವುದಾಗಿ ರಹಸ್ಯ ಮೂಲಗಳಿಂದ ತಿಳಿದುಬಂದಿದೆ.

