ಮಂಜೇಶ್ವರ: ಕೋವಿಡ್ ಲಾಕ್ ಡೌನ್ ನಿಂದಾಗಿ ಅನ್ಯ ರಾಜ್ಯಗಳಲ್ಲಿ ಸಿಲುಕಿಕೊಂಡಿರುವ ಕೇರಳೀಯರಿಗೆ ಸೂಕ್ತವಾದ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಬೇಕು, ಮುಂಬೈಯಲ್ಲಿ ಸಿಲುಕಿಕೊಂಡಿರುವ ಮಲಯಾಳಿಗಳನ್ನು ಶೀಘ್ರ ಸ್ವಂತ ನಾಡಿಗೆ ಕರೆತರುವ ವ್ಯವಸ್ಥೆಯನ್ನು ಒದಗಿಸಬೇಕು, ಗಡಿ ಪ್ರದೇಶದಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳ ವಿರುದ್ಧ ತೋರುತ್ತಿರುವ ನಿಲ್ರ್ಯಕ್ಷವನ್ನು ಕೊನೆಗೊಳಿಸಬೇಕು, ಗಡಿ ಪ್ರದೇಶಕ್ಕೆ ತಲುಪುವ ಮಲಯಾಳಿಗಳಿಗೆ ಸಂಘಟನೆಗಳು ನೀಡುತ್ತಿರುವ ಆಹಾರ ನೀರಿಗೆ ತಡೆಯೊಡ್ಡುವ ಹಿನ್ನೆಲೆಯಲ್ಲಿ ಸರ್ಕಾರವೇ ಅವರಿಗೆ ಆಹಾರ ನೀರನ್ನು ಒದಗಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಸೋಮವಾರ ಪ್ರತಿಭಟನಾ ಧರಣಿ ನಡೆಯಿತು.
ಕುಂಜತ್ತೂರು ಹಳೆ ಆರ್ ಟಿ ಓ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಮಂಜೇಶ್ವರ ಶಾಸಕ ಎಂ ಸಿ ಖಮರುದ್ದೀನ್ ರವರ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಭಟನಾ ಧರಣಿಯನ್ನು ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು.
ಈ ಸಂದರ್ಭ ಕಾಸರಗೋಡು ಶಾಸಕ ಎನ್ ಎ ನೆಲ್ಲಿಕುನ್ನು, ಕಾಸರಗೋಡು ಜಿಲ್ಲಾ ಪಂ. ಅಧ್ಯಕ್ಷ ಎ ಜಿ ಸಿ ಬಶೀರ್, ಎ.ಕೆ.ಎಂ. ಅಶ್ರಫ್, ಅಜೀಜ್ ಹಾಜಿ ಮೊದಲಾದವರು ಸರ್ಕಾರದ ನೀತಿಯನ್ನು ವಿರೋಧಿಸಿ ಮಾತನಾಡಿದರು.


