ತಿರುವನಂತಪುರ: ಇಂಧನ ಬೆಲೆ ಏರಿಕೆಯನ್ನು ವಿರೋಧಿಸಿ ಜುಲೈ 10 ರಂದು ರಾಜ್ಯ ವ್ಯಾಪಕವಾಗಿ ಮುಷ್ಕರ ನಡೆಸಲು ಮೋಟಾರ್ ವರ್ಕರ್ಸ್ ಯೂನಿಯನ್ ಸಂಯುಕ್ತ ಸಮಿತಿ ನಿರ್ಧರಿಸಿದೆ. ದಿನನಿತ್ಯ ತೀವ್ರ ಗತಿಯಲ್ಲಿ ಏರುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಕಾರಣ ಟ್ಯಾಕ್ಸಿ ವಾಹನಗಳಿಗೆ ಭಾರೀ ನಷ್ಟ ಉಂಟಾಗುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ಗಳನ್ನು ಟ್ಯಾಕ್ಸಿ ವಾಹನಗಳಿಗೆ ಸಬ್ಸಿಡಿ ಬೆಲೆಯಲ್ಲಿ ದೊರಕುವಂತೆ ಮಾಡಬೇಕು, ಇಂಧನ ಬೆಲೆಯೇರಿಕೆಯನ್ನು ಕಡಿತಗೊಳಿಸಬೇಕು, ಇಂಧನ ಮಾರಾಟವನ್ನು ಜಿಎಸ್‍ಟಿ ವ್ಯಾಪ್ತಿಗೆ ತರಬೇಕು ಎಂಬ ಪ್ರಧಾನ ಬೇಡಿಕೆಯೊಂದಿಗೆ ಜು.10 ರಂದು ಮುಷ್ಕರ ನಡೆಯಲಿದೆ. ಜೊತೆಗೆ ಆಟೋ-ಟ್ಯಾಕ್ಸಿ ಗಳ ಕನಿಷ್ಠ ದರವನ್ನು ಪುನರ್ ನವೀಕರಿಸಬೇಕೆಂದೂ ಮುಷ್ಕರ ಸಮಿತಿ ಒತ್ತಾಯಿಸಿದೆ.
ಮುಷ್ಕರ ಜುಲೈ 10 ರಂದು ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ರವರೆಗೆ ನಡೆಯಲಿದೆ. ಜುಲೈ 6 ರಂದು ಆಟೋ-ಟ್ಯಾಕ್ಸಿ ಸ್ಟ್ಯಾಂಡ್‍ಗಳಲ್ಲಿ ಪ್ರತಿಭಟನಾರ್ಥ ಕರಿ ದಿನಾಚರಣೆಯನ್ನೂ ನಡೆಸಲು ಯೂನಿಗಳು ನಿರ್ಧರಿಸಿವೆ.
ತೈಲ ಕಂಪನಿಗಳು ಜೂನ್ 7 ರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ದಿನನಿತ್ಯ ಏರಿಸಲು ಪ್ರಾರಂಭಿಸಿವೆ. ಕೇಂದ್ರ ಸರ್ಕಾರವು ಅಬಕಾರಿ ತೆರಿಗೆಯನ್ನು ಹೆಚ್ಚಿಸುವುದರಿಂದ ತೈಲ ಬೆಲೆ ಏರಿಕೆಯಾಗಿದೆ ಎಂದು ಕಂಪನಿಗಳು ಹೇಳಿವೆ.


