ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ 18 ಕೋಟಿ ರೂ.ನ 316 ಸುಭಿಕ್ಷ ಕೇರಳಂ ಯೋಜನೆಗಳಿಗೆ ಜಿಲ್ಲಾ ಯೋಜನೆ ಸಮಿತಿ ಸಭೆ ಮಂಜೂರಾತಿ ನೀಡಿದೆ.
ಜಿಲ್ಲಾ ಯೋಜನೆ ಸಮಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಯೋಜನೆ ಕುರಿತು ಮಾಹಿತಿ ನೀಡಿದರು.
38 ಗ್ರಾಮಪಂಚಾಯತ್ ಗಳು, 6 ಬ್ಲೋಕ್ ಪಂಚಾಯತ್ ಗಳು, 3 ನಗರಸಭೆಗಳು ಸಹಿತ 48 ಸ್ಥಳೀಯಾಡಳಿತ ಸಂಸ್ಥೆಗಳ 316 ಯೋಜನೆಗಳಲ್ಲಿ 1800 ಲಕ್ಷ ರೂ.(18 ಕೋಟಿ ರೂ.) ನ ಬದಲಾವಣೆ ಅಗತ್ಯವಿರುವವು ಸಹಿತ ಯೋಜನೆಗಳಿಗೆ ಮಂಜೂರಾತಿ ನೀಡಲಾಗಿದೆ. ಈ ಹಿಂದೆಯೇ ಮಂಜೂರಾತಿ ನಿಡಿದ್ದ 234 ಯೋಜನೆಗಳಲ್ಲಿ ಬದಲಾವಣೆ ತಂದು, 136 ಯೋಜನೆಗಳನ್ನು ಕೈಬಿಟ್ಟು 316 ಸುಭಿಕ್ಷ ಕೇರಳಂ ಯೋಜನೆಗಳು ಅಂಗೀಕಾರ ಪಡೆದಿವೆ. ಬಂಜರು ಜಾಗದಲ್ಲಿ ಭತ್ತದ ಕೃಷಿ, ತರಕಾರಿಕೃಷಿ, ಮೊಟ್ಟೆ ನೀಡುವ ಕೋಳಿ ಸಾಕಣೆ, ಮೀನಿನ ಸಾಕಣೆ, ಎಡೆ ಬೆಳೆ ಕೃಷಿ, ಗೆಡ್ಡೆ-ಗೆಣಸು ಕೃಷಿ, ಬಾಳೆ ಕೃಷಿ ಇತ್ಯಾದಿ ಈ ಯೋಜನೆಯಲ್ಲಿ ಸೇರಿವೆ. ಮನೆಯಂಗಳದಲ್ಲಿ, ತಾರಸಿಯಲ್ಲಿ ತರಕಾರಿ ಕೃಷಿ, ಹಣ್ಣುಗಳ ಕೃಷಿ ನಡೆಸಲು ಸಸಿ ವಿತರಣೆಯೂ ಈ ಯೋಜನೆಯಲ್ಲಿದೆ. ಉತ್ಪಾದನೆ ವಲಯದಲ್ಲಿ ಈಗಾಗಲೇ ಜಾರಿಮಾಡಲಾಗುತ್ತಿರುವ ಕೃಷಿ ಅಭಿವೃದ್ಧಿ -ಪಶುಸಂಗೋಪನೆ ಯೋಜನೆಗಳಲ್ಲದೆ ಈ ಯೋಜನೆಗಳು ಜಾರಿಗೊಳ್ಳಲಿವೆ.
ಜಿಲ್ಲಾ ಯೋಜನೆ ಅಧಿಕಾರಿ ಎಸ್.ಸತ್ಯಪ್ರಕಾಶ್, ಡಿ.ಪಿ.ಸಿ. ಸದಸ್ಯರಾದ ಆಲಿ, ಹರ್ಷಾದ್ ವರ್ಕಾಡಿ, ಷಾನವಾಝ್ ಪಾದೂರು, ಎಂ.ನಾರಾಯಣನ್, ಪಿ.ವಿ.ಪದ್ಮಜಾ, ಪುಷ್ಪಾ ಅ,ಎಕ್ಕಳ, ವಿ.ಪಿ.ಜಾನಕಿ, ಎ.ಎ.ಜಲೀಲ್, ಡಿ.ಪಿ.ಸಿ. ಸರಕಾರಿ ನಾಮಿನಿ ಕೆ.ಬಾಲಕೃಷ್ಣನ್, ಪ್ರಧಾನ ಕೃಷಿ ಅಧಿಕಾರಿ ವೀಣಾರಾಣಿ, ಎ.ಡಿ.ಸಿ. ಜನರಲ್ ಬೆವಿನ್ ಜಾನ್ ವರ್ಗೀಸ್ ಮೊದಲಾದವರು ಉಪಸ್ಥಿತರಿದ್ದರು.


