ಉಪ್ಪಳ/ಬದಿಯಡ್ಕ: ಕೊರೋನಾ ಆತಂಕದ ನಡುವೆ ಕಾಸರಗೋಡು ಜಿಲ್ಲೆಯ ಹಲವೆಡೆ ವ್ಯಾಪಕ ಪ್ರಮಾಣದಲ್ಲಿ ಡೆಂಗ್ಯೂ ಜ್ವರ ಹರಡುತ್ತಿದ್ದು, ಈಗಾಗಲೇ 200ಕ್ಕೂ ಅಧಿಕ ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೈವಳಿಕೆ, ಪುತ್ತಿಗೆ,ಕುಂಬಳೆ, ಬದಿಯಡ್ಕ,ಕಾರಡ್ಕ, ದೇಲಂಪಾಡಿ, ಪುಲ್ಲೂರು ಪೆರಿಯ ವ್ಯಾಪ್ತಿಯಲ್ಲಿ ಡೆಂಗ್ಯೂ ಹೆಚ್ಚುತ್ತಿದ್ದು ಒಂದೆಡೆ ಕೊರೋನಾ ಭೀತಿಯ ನಡುವೆ ಸಾಂಕ್ರಾಮಿಕ ರೋಗಗಗಳು ಜನಸಾಮಾನ್ಯರಲ್ಲಿ ಹಾಗೂ ಆರೋಗ್ಯ ಇಲಾಖೆಯನ್ನು ಆತಂಕಕ್ಕೆ ಸಿಲುಕಿಸಿದೆ. ಕಾಸರಗೋಡು ಜನರಲ್ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಸರ್ಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ದಿನಂಪ್ರತಿ ನೂರಾರು ರೋಗಿಗಳು ತಲಪುತ್ತಿದ್ದು ಈ ಪೈಕಿ ಹಲವು ಮಂದಿಗೆ ಡೆಂಗ್ಯೂ ದೃಢಪಟ್ಟಿದೆ.
ಕಾಸರಗೋಡು ನಗರಸಭಾ ವ್ಯಾಪ್ತಿಯಲ್ಲೂ ಡೆಂಗ್ಯೂ ಪತ್ತೆಯಾಗಿದೆ. ಪೈವಳಿಕೆ, ಬಾಯಾರು, ಚಿಪ್ಪಾರು, ಕುಂಬಳೆ, ಸೀತಾಂಗೋಳಿ-ದರ್ಬೆತ್ತಡ್ಕ, ಪುತ್ತಿಗೆ, ಮುಗು, ಧರ್ಮತ್ತಡ್ಕ, ಬದಿಯಡ್ಕ, ಕುಂಬ್ಡಾಜೆ, ವಳಕ್ಕುಂಜ, ಅದೂರು, ಮುಳ್ಳೇರಿಯ, ಮಿಂಚಿಪದವು, ಕರ್ಮ0ತ್ತೋಡಿ ಮೊದಲಾದೆಡೆಗಳಲ್ಲಿ ಡೆಂಗ್ಯೂ ಹಾವಳಿ ಹೆಚ್ಚಾಗಿದೆ. ಮುಳ್ಳೇರಿಯಾ ವ್ಯಾಪ್ತಿಯ 80, ಬದಿಯಡ್ಕ ವ್ಯಾಪ್ತಿಯ 105 ಮಂದಿ ಈಗಾಗಲೇ ಚಿಕಿತ್ಸೆಯಲ್ಲಿದ್ದಾರೆ.
ಅನಿರೀಕ್ಷಿತ ಬೇಸಿಗೆ ಮಳೆ, ನಿಧಾನಗತಿಯ ಮುಂಗಾರು ಕಾರಣ ಮಾಲಿನ್ಯಗಳು ತೊಳೆದುಹೋಗದೆ ಡೆಂಗ್ಯೂ ಹಾವಳಿ ಹೆಚ್ಚಾಗಿದೆ. ಜೊತೆಗೆ ತುರಿಕೆ, ಕೆಮ್ಮು, ಶೀತ ಸಹಿತ ಇತರ ಜ್ವರಗಳು, ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದು, ಕೊರೊನ ಮಹಾಮಾರಿ ಜೊತೆಗೆ ಡೆಂಗ್ಯೂ ಸಾಂಕ್ರಾಮಿಕ ರೋಗಗಳು ಜನಸಾಮಾನ್ಯರ ದೈನಂದಿನ ಜೀವನಕ್ಕೆ ಸವಾಲಾಗುತ್ತಿದೆ.
ಚಿಕಿತ್ಸೆಗೆ ಸೌಲಭ್ಯ ಕೊರತೆ:
ಈ ಹಿಂದೆ ಡೆಂಗ್ಯೂ ವಿನಂತಹ ಪಿಡುಗುಗಳ ಚಿಕಿತ್ಸೆಗೆ ಕಾಸರಗೋಡಿನ ಜನರು ಮಂಗಳೂರಿನ ಆಸ್ಪತ್ರೆಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಲಾಕ್ ಡೌನ್ ಕಾರಣ ಮುಚ್ಚಿರುವ ಅಂತರ್ ರಾಜ್ಯ ಗಡಿಯ ಕಾರಣ ಮಂಗಳೂರು ಸಹಿತ ದಕ್ಷಿಣ ಕನ್ನಡ ಪ್ರದೇಶಗಳ ಆಸ್ಪತ್ರೆಗಳಿಂದ ಈ ಬಾರಿ ಚಿಕಿತ್ಸೆ ಲಭ್ಯವಾಗುತ್ತಿಲ್ಲ. ಕಾಸರಗೋಡಿನಲ್ಲಿ ಅಗತ್ಯದ ಸೌಕರ್ಯಗಳಿಲ್ಲದಿರುವುದರಿಂದ ಕಣ್ಣೂರು ಜಿಲ್ಲೆಯ ಪರಿಯಾರಂ ವೈದ್ಯಕೀಯ ಕಾಲೇಜಿಗೆ ತೆರಳಬೇಕಾಗಿದ್ದು ಕೆಳ, ಮಧ್ಯಮ ವರ್ಗದ ಜನರಿಗೆ ಭಾರೀ ಆರ್ಥಿಕ ಸಂದಿಗ್ದತೆ, ಸಂಚಾರ ಸೌಕರ್ಯ ವೆಚ್ಚ ಸಹಿತ ಇತರ ವ್ಯವಸ್ಥೆಗಳು ಜಟಿಲವಾಗಿದೆ.


