ಕುಂಬಳೆ: ಕೋವಿಡ್ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಶಾಲಾ ತರಗತಿ ಆನ್‍ಲೈನ್ ಮೂಲಕ ಆರಂಭಿಸಿದರೂ ಎರಡೂವರೆ ಲಕ್ಷಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು ಈ ವ್ಯವಸ್ಥೆಯಿಂದ ಹೊರಗುಳಿದಿದ್ದಾರೆ. ಕೈಟ್ ವಿಕ್ಟರ್ ಚಾನೆಲ್ ಮೂಲಕ ನೇರ ಪ್ರಸಾರ ನಡೆಯುತ್ತಿದ್ದರೆ ಇದು ಸ್ಮಾರ್ಟ್ ಫೆÇೀನ್, ಕಂಪ್ಯೂಟರ್‍ಗಳ ಮೂಲಕವೂ ಲಭ್ಯವಾಗುತ್ತಿದೆ. ಜೊತೆಗೆ ಯು ಟ್ಯೂಬ್ ಮೂಲಕವೂ ತರಗತಿ ಲಭ್ಯವಾಗುತ್ತಿದೆ.
ಆದರೆ ಇದ್ಯಾವುದೇ ವ್ಯವಸ್ಥೆಯಿಲ್ಲದೆ ರಾಜ್ಯದ 2.62 ಲಕ್ಷ ಮಂದಿ ಸರ್ಕಾರದ ಆನ್‍ಲೈನ್ ತರಗತಿ ವ್ಯವಸ್ಥೆಯಿಂದ ವಂಚಿತರಾಗಿದ್ದಾರೆ. ಸರ್ವ ಶಿಕ್ಷಣ ಅಭಿಯಾನ ವತಿಯಿಂದ ನಡೆದ ಅವಲೋಕನದನ್ವಯ ರಾಜ್ಯದಲ್ಲಿ 2,61,784 ಮಂದಿ ಆನ್‍ಲೈನ್ ತರಗತಿಯಿಂದ ಹೊರಗುಳಿದಿರುವುದು ಪತ್ತೆಯಾಗಿದೆ.
ಇಂತಹ ಮಕ್ಕಳನ್ನು ಪತ್ತೆಹಚ್ಚಿ ಸನಿಹದ ವಾಚನಾಲಯ, ಅಂಗನವಾಡಿಗಳಲ್ಲಿ ಲ್ಯಾಪ್‍ಟಾಪ್ ಅಳವಡಿಸಿ ತರಗತಿಯಲ್ಲಿ ಪಾಲ್ಗೊಳ್ಳಲು ವ್ಯವಸ್ಥೆ ಮಾಡುವಂತೆ ಶಿಕ್ಷಣ ಸಚಿವರು ಆದೇಶಿಸಿದ್ದಾರೆ. ಈ ರೀತಿ ಆನ್‍ಲೈನ್ ವ್ಯವಸ್ಥೆ ಇಲ್ಲದಿರುವ ಎಲ್ಲಾ ಕಡೆ ಬದಲಿ ವ್ಯವಸ್ಥೆ ನಡೆಸುವಂತೆ ಸೂಚಿಸಲಾಗಿದೆ. ಆನ್‍ಲೈನ್ ವ್ಯವಸ್ಥೆ ಇಲ್ಲದಿರುವ ಮಕ್ಕಳಲ್ಲಿ ಸಂಬಂಧಪಟ್ಟ ಶಿಕ್ಷಕರು ಸಂಪರ್ಕ ಇರಿಸಿಕೊಂಡು ಅವರ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆಯೂ ಸೂಚಿಸಲಾಗಿದೆ.
ಈಗಾಗಲೇ ಆನ್‍ಲೈನ್ ವ್ಯವಸ್ಥೆ ಇಲ್ಲದಿರುವ ಚಿಂತೆಯಿಂದ ಮಲಪ್ಪುರಂನ ವಳಾಂಚೇರಿಯಲ್ಲಿ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆಗೆ ಶರಣಾದ ವಿಷಯದ ಬಗ್ಗೆ ರಾಜ್ಯ ಶಿಕ್ಷಣ ಸಚಿವ ಪೆÇ್ರ.ಸಿ.ರವೀಂದ್ರನಾಥ್, ಜಿಲ್ಲಾ ಶಿಕ್ಷಣ ಉಪನಿರ್ದೇಶಕರಿಂದ ವರದಿ ಪಡೆದುಕೊಂಡಿದ್ದಾರೆ. ಅದೇ ರೀತಿ ಆನ್‍ಲೈನ್ ತರಗತಿ ನಡೆಸಿರುವ ಶಿಕ್ಷಕಿಯರನ್ನು ಸಾಮಾಜಿಕ ಜಾಲತಾಣಗಳ ಮೂಲಕ ಅವಹೇಳನಗೈದಿರುವವರ ವಿರುದ್ಧ ಕಠಿಣ ಕ್ರಮ ಆಗ್ರಹಿಸಿ ಸಾರ್ವಜನಿಕ ವಿದ್ಯಾಭ್ಯಾಸ ನಿರ್ದೇಶಕರು ಮನವಿ ಸಲ್ಲಿಸಿದ್ದಾರೆ.
ಅಭಿಮತ:
- ರಾಜ್ಯದಲ್ಲಿ ಈಗ ನಡೆಸಲಾಗುತ್ತಿರುವ ಆನ್‍ಲೈನ್ ತರಗತಿಗಳು ಕೇವಲ ಟ್ರಯಲ್ ಮಾತ್ರವೇ ಆಗಿದೆ. ಅದನ್ನು ಮತ್ತೆ ಪ್ರಸಾರ ನಡೆಸಲಾಗುವುದು. ಯಾರಿಗೂ ತರಗತಿ ನಷ್ಟಗೊಳ್ಳದು.
- ಸಿ.ರವೀಂದ್ರನಾಥ್
ಶಿಕ್ಷಣ ಸಚಿವ, ಕೇರಳ


