ನವದೆಹಲಿ: ಜೂನ್ 30ರೊಳಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1 ಲಕ್ಷಕ್ಕೆ ಏರಿಕೆಯಾಗಲಿದ್ದು, ಮುಂದಿನ ದಿನಗಳು ದೆಹಲಿಗೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಬುಧವಾರ ಹೇಳಿದ್ದಾರೆ.
ಸುದ್ದಿಗಾರರೊಂಡಿಗೆ ಮಾತನಾಡಿದ ಅವರು, ರಾಜ್ಯ ವಿಪತ್ತು ನಿರ್ವಹಣಾ ಪಡೆಗಳೊಂದಿಗೆ ನಿನ್ನೆ ಸಭೆ ನಡೆಸಿ ಮಾತುಕತೆ ನಡೆಸಿದ್ದೆ. ಈ ವೇಳೆ ಕೊರೋನಾ ಪರಿಸ್ಥಿತಿ ಕುರಿತಂತೆ ಮಾತುಕತೆ ನಡೆಸಲಾಗಿದ್ದು, ರಾಷ್ಟ್ರರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಜೂನ್.15ರೊಳಗೆ ಸೋಂಕಿತರ ಸಂಖ್ಯೆ 44,000ಕ್ಕೆ ಏರಿಕೆಯಾಗಲಿದೆ. ಜೂನ್.30ರೊಳಗೆ ಈ ಸಂಖ್ಯೆ ದ್ವಿಗುಣಗೊಂಡು ಸೋಂಕಿತರ ಸಂಖ್ಯೆ 1 ಲಕ್ಷಕ್ಕೆ ಏರಿಕೆಯಾಗಲಿದೆ. ಜೂನ್. 15ರೊಳಗೆ ನಮಗೆ 6,681 ಹಾಸಿಗೆಗಳ ಅಗತ್ಯವಿದೆ. ಜೂನ್. 30ರೊಳಗೆ 15,000 ಹಾಸಿಗೆಗಳು ಬೇಕಿದೆ. ಜೂನ್. 31ರೊಳಗೆ 80,000 ಹಾಸಿಗೆಗಳ ಅಗತ್ಯ ಬೀಳಲಿದೆ ಎಂದು ಹೇಳಿದ್ದಾರೆ.
ಸಾಮಾಜಿಕ ಅಂತರ ಹಾಗೂ ಮಾಸ್ಕ್ ಬಳಕೆಗಳು ಜನರ ಸುರಕ್ಷತೆಗಾಗಿ ಜನತೆಯ ಆಂದೋಲನವಾಗಬೇಕು. ಜನರ ಆಶೀರ್ವಾದ ಹಾಗೂ ಆರೈಕೆಗಳಿಂದ ನನ್ನ ಕೊರೋನಾ ವೈರಸ್ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ ಎಂದು ತಿಳಿಸಿದ್ದಾರೆ. ಬಳಿಕ ಕೇಂದ್ರೀಯ ಆಸ್ಪತ್ರೆಗಳನ್ನು ಹೊರತುಪಡಿಸಿ ದೆಹಲಿ ಆಸ್ಪತ್ರೆಗಳು ದೆಹಲಿ ಜನತೆಗಷ್ಟೇ ಸೀಮಿತಿ ಎಂಬ ತಮ್ಮ ಆದೇಶವನ್ನು ರಾಜ್ಯಪಾಲರು ಕೈಬಿಟ್ಟಿರುವ ಕುರಿತಂತೆ ಮಾತನಾಡಿದ ಅವರು, ರಾಜ್ಯಪಾಲರ ಆದೇಶವನ್ನು ನಾವು ಪಾಲನೆ ಮಾಡುತ್ತೇವೆ ಎಂದಿದ್ದಾರೆ. ಆದೇಶಗಳನ್ನು ಒಪ್ಪದಿರುವುದು, ವಾದ ಮಾಡಲು ಇದು ಸಮಯವಲ್ಲ. ರಾಜ್ಯಪಾಲರು ನೀಡಿರುವ ಎಲ್ಲಾ ಆದೇಶವನ್ನು ಪಾಲನೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ನಾಳೆಯಿಂದ ಹೊರಗೆ ಹೋಗಲು ನಿರ್ಧಾರ ಕೈಗೊಳ್ಳಲಾಗಿದ್ದು, ಕೋವಿಡ್ ಸಿದ್ಧತೆ ಹಾಗೂ ಪರಿಸ್ಥಿತಿಯನ್ನು ಸ್ವತಃ ಪರಿಶೀಲನೆ ನಡೆಸಲಿದ್ದೇನೆ. ಕೊರೋನಾ ವಿರುದ್ಧದ ನಾವೆಲ್ಲರೂ ಒಗ್ಗೂಡಿ ಹೋರಾಡಬೇಕು ಎಂದು ಹೇಳಿದ್ದಾರೆ.


