ಮುಳ್ಳೇರಿಯ: ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಗಳಲ್ಲಿ ರಸ್ತೆ ಗಳ ಸಹಿತ ನವೀನ ಯೋಜನೆಗಳನ್ನು ಅನುಷ್ಠಾನಗೊಳಿಸಬಾರದೆಂಬ ಕಾನೂನು ವ್ಯವಸ್ಥೆಯನ್ನು ತೆಗೆದು ಹಾಕಲಾಗಿದ್ದು ಜಿಲ್ಲೆಯ ಗುಡ್ಡಗಾಡು ಪ್ರದೇಶಗಳಲ್ಲಿನ ಮೀಸಲು ಅರಣ್ಯ ಪ್ರದೇಶಗಳ ನಾಗರಿಕರ ಬಹುಕಾಲದ ಬೇಡಿಕೆ ಸಾಕಾರಗೊಳ್ಳುವ ಆದೇಶವೊಂದನ್ನು ಸರ್ಕಾರ ಅನುಮೋದನೆ ನೀಡಿದೆ. ದೇಲಂಪಾಡಿ ಮತ್ತು ಕಾರಡ್ಕ ಗ್ರಾಮ ಪಂಚಾಯಿತಿಗಳಲ್ಲಿ ಮೂರು ರಸ್ತೆಗಳಿಗೆ, ಸೇತುವೆಗಳಿಗೆ ಅನುಮೋದನೆ ನೀಡಲಾಗಿದೆ. ಎರಡೂ ಪಂಚಾಯಿತಿಗಳಿಗೆ ರಾಜ್ಯ ಅರಣ್ಯ ಇಲಾಖೆ ಸಚಿವರಿಂದ ಆದೇಶ ಬಂದಿದೆ.
ಕಾರಡ್ಕ ಗ್ರಾಮ ಪಂಚಾಯತಿಯ ಕರ್ಮಂತೋಡಿ, ಕೊಟ್ಟಂಗುಳಿ, ಪೂವಡ್ಕ, ಅಡ್ಕತ್ತೊಟ್ಟಿ ರಸ್ತೆಗಳಿಗೂ, ದೇಲಂಪಾಡಿ ಗ್ರಾ.ಪಂ. ನ ಪಾಂಡಿ ಬಳವಂತ್ತಡ್ಕ ರಸ್ತೆಗಳ ಕಾಂಕ್ರೀಟೀಕರಣಕ್ಕೆ, ವೆಳ್ಳರಿಕಯ ಸೇತುವೆ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ.
ಅರಣ್ಯ ಇಲಾಖೆ ಕಾಮಗಾರಿಗಳಿಗಾಗಿ ನೀಡುವ ಭೂಪ್ರದೇಶಗಳ ಸರ್ಕಾರ ನಿಗದಿಪಡಿಸಿದ ಬೆಲೆಯನ್ನು ಆಯಾ ಗ್ರಾ.ಪಂ.ಗಳು ಇಲಾಖೆಗೆ ನೀಡಬೇಕಾಗುತ್ತದೆ. ನೀಡಬೇಕಾದ ನಿಗದಿತ ಮೌಲ್ಯವನ್ನು ಗುರುತುಪಡಿಸುವಂತೆ ಜಿಲ್ಲಾ ಅರಣ್ಯಾಧಿಕಾರಿ ಗ್ರಾ.ಪಂ.ಗಳಿಗೆ ಪತ್ರಮುಖೇನ ತಿಳಿಸಿದೆ.
ಕಾಂಕ್ರೀಟ್ ರಸ್ತೆ ನಿರ್ಮಿಸುವಾಗ ಮೂರು ಮೀಟರ್ ಅಗಲವಿರಲು ಅನುಮತಿ ನೀಡಲಾಗಿದೆ. ಸಂರಕ್ಷಿತ ಅರಣ್ಯ ರಸ್ತೆಗಳಿಗೆ ಅನುಮತಿ ಪಡೆಯಲು, ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಬೇಕಾಗಿತ್ತು. ಕೇಂದ್ರ ಅರಣ್ಯ ಕಾಯ್ದೆ ಮತ್ತು ರಾಜ್ಯ ಕಾನೂನುಗಳ ಅಡಿಯಲ್ಲಿ ಅನುಮತಿ ನೀಡಲಾಗಿದೆ.
ಕಠಿಣ ಅರಣ್ಯ ಕಾನೂನಿನಿಂದಾಗಿ ಈವರೆಗೆ ಅರಣ್ಯ ಪ್ರದೇಶಗಳಲ್ಲಿ ರಸ್ತೆ ನಿರ್ಮಾಣದಂತಹ ಆಧುನಿಕ ವ್ಯವಸ್ಥೆಗಳಿಗೆ ಅನುಮತಿ ಇರಲಿಲ್ಲ. ಅರಣ್ಯ ಪ್ರದೇಶಗಳಲ್ಲಿನ ಜನರಿಗೆ ರಸ್ತೆ ಸೌಕರ್ಯಗಳಿಲ್ಲದೆ ಸಂಚಾರ ವ್ಯವಸ್ಥೆಗೆ ತೊಡಕಿರುವವರಿಗೆ ರಸ್ತೆ ಸೌಕರ್ಯಗಳಿಗಾಗಿ ಇನ್ನು ಆನ್‍ಲೈನ್ ಅರ್ಜಿ ವ್ಯವಸ್ಥೆ ಲಭ್ಯವಿದೆ. ಸ್ಥಳೀಯ ಗ್ರಾ.ಪಂ.ಗಳ ಮೂಲಕ ಅರ್ಜಿ ಸಲ್ಲಿಸಬೇಕು. ವನಾಂತರ ಪ್ರದೇಶಗಳಲ್ಲೂ ರಸ್ತೆ ಕಾಮಗಾರಿಗೆ ನೀಡಲಾದ ಐತಿಹಾಸಿಕ ಕಾನೂನು ತಿದ್ದುಪಡಿಯಿಂದ ಈ ಪ್ರದೇಶದ ನೂರಾರು ಕುಟುಂಬಗಳ ಪ್ರಯಾಣದ ತೊಂದರೆಗಳು ನಿವಾರಣೆಯಾಗಲಿದೆ ಎಂದು ಆಶಿಸಲಾಗಿದೆ.


