ಕಾಸರಗೋಡು: ಜೂ.8 ರಂದು ಮಲೆಯಾಳ ಪತ್ರಿಕಾ ಮಾಧ್ಯಮವೊಂದು ಪ್ರಕಟಿಸಿದ ಜಾಹೀರಾತು ಚಿತ್ರ ಭಾರೀ ವಿವಾದ ಉಂಟುಮಾಡಿ ಬಳಿಕ ಆಶ್ಚರ್ಯಕರ ವಿಚಾರಗಳೊಂದಿಗೆ ಸುಖಾಂತ್ಯಗೊಂಡಿದ್ದು ಬೆರಗುಗೊಳಿಸಿದೆ. ಮಲೆಯಾಳ ಪತ್ರಿಕೆಯೊಂದರಲ್ಲಿ ಪ್ರಕಟಗೊಂಡ ಜಾಹೀರಾತು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು. ಬಹಳಷ್ಟು ಜನರೂ ಇದು ಪತ್ರಿಕೆಯ ಕಡೆಯಿಂದಾದ ತಪ್ಪು ಎಂದೇ ವ್ಯಾಖ್ಯಾನಿಸಲ್ಪಟ್ಟಿತು.
ಘಟನೆಯೆಂದರೆ ಜೂ.8 ರಮದು ಪ್ರಕಟಗೊಂಡ ಜಾಹೀರಾತು ಚಿತ್ರದಲ್ಲಿ ಇಬ್ಬರು ಮಕ್ಕಳ ಚಿತ್ರದ ಜೊತೆಗೆ ಆ ಇಬ್ಬರು ಮಕ್ಕಳ ಹೆಸರು ಒಂದೇ ಆಗಿತ್ತು. ಅಷ್ಟಾದರೆ ತೊಂದರೆ ಇರಲಿಲ್ಲವೇನೊ. ಜೊತೆಗೆ ಅವರ ತಂದೆ-ತಾಯಿ, ವಿಳಾಸಗಳೆಲ್ಲವೂ ಸಮಾನವಾಗಿತ್ತು. ಸಯಂತ್ ಕೃಷ್ಣ, ತಂದೆ, ತಾಯಿ ಮತ್ತು ವಿಳಾಸ ಎಲ್ಲರೂ ಒಂದೇ. ವಿರೋಧಾಭಾಸವೆಂದರೆ ಚಿತ್ರದ ಒಂದು ಬದಿಯ ಮಗುವಿಗೆ ಶ್ರದ್ದಾಂಜಲಿಯದ್ದಾದರೆ ಇನ್ನೊಂದು ಬದಿಯ ಚಿತ್ರ ಹುಟ್ಟುಹಬ್ಬದ ಶುಭಾಶಯವನ್ನು ತಿಳಿಸುತ್ತದೆ. ಯಾರೇ ಆದರೂ ಇದು ಪತ್ರಿಕೆಯವರ ಪ್ರಕಟಣೆಯ ದೋಷವೆಂದೇ ಬಗೆಯುವುದರಲ್ಲಿ ತಪ್ಪಿಲ್ಲ.
ಕಾಸರಗೋಡಿನ ಪರ್ಲಕ್ಕಾಡು ಮೂಲದ ನಾರಾಯಣನ್ ಮತ್ತು ಸುಷ್ಮಾ ತಮ್ಮ ಇಬ್ಬರು ಮಕ್ಕಳಿಗೆ ಒಂದೇ ಹೆಸರಿರಿಸಿರುವುದು ಇಂತಹ ಗೊಂದಲಕ್ಕೆ ಕಾರಣವಾಯಿತು. ಇದು ಆಶ್ಚರ್ಯವೆನಿಸಬಹುದು, ಆದರೆ ದಂಪತಿಗಳು ಹಾಗೆ ಮಾಡಲು ಹಲವು ಕಾರಣಗಳನ್ನು ಮುಂದಿಟ್ಟಿದ್ದಾರೆ. ಅವರ ಹಿರಿಯ ಮಗ ಸಯಂತ್ ಕೃಷ್ಣ ವರ್ಷಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದು, ಬಳಿಕ ಮೂರು ವರ್ಷಗಳ ನಂತರ ಜೂನ್ 7 ರಂದು ಎಂದರೆ ಸಯಂತ್ ಕೃಷ್ಣ ಮೃತನಾದ ದಿನವೇ ಎರಡನೇ ಹೆರಿಗೆಯಲ್ಲೂ ಗಂಡುಮಗುವಾಗುತ್ತದೆ. ಹಿರಿಯ ಮಗನ ಹೆಸರಲ್ಲಿ ಎರಡನೇ ಮಗುವಿಗೂ ಸಯಂತ್ ಕೃಷ್ಣ ಎಂದೇ ನಾಮಕರಣ ಮಾಡಿರುವುದು ಹೆತ್ತ ಹೃದಯದ ಮಮತೆಯ ಸಂಕೇತವಾಗಿ ಆಶ್ಚರ್ಯ ಮೂಡಿಸಿದ್ದಾದರೂ ಹಿರಿಯ ಮಗ ಮೃತಪಟ್ಟ ದಿನದಂದೇ ಎರಡನೇ ಪುತ್ರ ಜನಿಸಿರುವುದು ವಿಶೇಷವಾಗಿ ಗಮನ ಸೆಳೆಯುತ್ತದೆ.
ಕಳೆದ ಭಾನುವಾರ ಅವರ ಎರಡನೇ ಮಗುವಿನ ಜನ್ಮದಿನ. ಸಹಜವೆಂಬಂತೆ ಹಿರಿಯ ಪುತ್ರನ ಮರಣದ ದಿನವೂ ಕೂಡ. ಈ ಕಾರಣ ಪತ್ರಿಕೆಯಲ್ಲಿ ಜಾಹೀರಾತು ನೀಡಲಾಗಿತ್ತು. ಹಿರಿಯ ಪುತ್ರ 2014ರ ಜೂ.7, ರಂದು ಆಟೋ ಅಪಘಾತಕ್ಕೊಳಗಾಗಿ ಮೃತಪಟ್ಟಿದ್ದನು. ಎರಡನೆ ಪುತ್ರ 2017ರ ಜೂ. 7 ರಂದು ಜನಿಸಿದ್ದನು.



