ನವದೆಹಲಿ: ಭಾರತದಲ್ಲಿ ಕೊರೋನಾ ರೌದ್ರನರ್ತನ ಮುಂದುವರೆದಿದ್ದು, ಕೇವಲ ಒಂದೇ ದಿನದಲ್ಲಿ 9,983 ಮಂದಿಯಲ್ಲಿ ಹೊಸದಾಗಿ ವೈರಸ್ ಪತ್ತೆಯಾಗಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,56,611 ಲಕ್ಷಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೋಮವಾರ ಮಾಹಿತಿ ನೀಡಿದೆ.
ಈ ನಡುವೆ ದೇಶದಲ್ಲಿ ಮಹಾಮಾರಿ ವೈರಸ್'ಗೆ ಕಳೆದ 24 ಗಂಟೆಗಳಲ್ಲಿ 206 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ ಕೂಡ 7,135ಕ್ಕೆ ತಲುಪಿದೆ.
ಈ ಮಧ್ಯೆ ಇಲ್ಲಿಯ ವರೆಗೂ ಒಟ್ಟು 1,24,095 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇನ್ನೂ ದೇಶದಲ್ಲಿ 1,25,381 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆಂದು ತಿಳಿದುಬಂದಿದೆ.
ಉಳಿದಂತೆ ತಮಿಳುನಾಡಿನಲ್ಲಿ ಮತ್ತೆ 1515 ಹೊಸ ಕೊರೋನಾ ಪ್ರಕರಣಗಳು ದೃಢವಾಗಿದ್ದು, ಸೋಂಕಿತರ ಸಂಖ್ಯೆ 31,684ಕ್ಕೆ ತಲುಪಿದೆ. ದೆಹಲಿಯಲ್ಲಿ 1282, ಜಮ್ಮು ಮತ್ತು ಕಾಶ್ಮೀರದಲ್ಲಿ 620, ಹರಿಯಾಣದಲ್ಲಿ 496, ಗುಜರಾತ್ ನಲ್ಲಿ 480, ಪಶ್ಚಿಮ ಬಂಗಾಳದಲ್ಲಿ 449 ಪ್ರಕರಣಗಳು ದಾಖಲಾಗಿವೆ.


