ತಿರುವನಂತಪುರ: ಕೋವಿಡ್ ಸೋಂಕಿನ ಅತಿ ಭೀತಿಯ ಮಧ್ಯೆ ವಿದೇಶಗಳಲ್ಲಿ ನೆಲಸಿರುವ ಕೇರಳೀಯರನ್ನು ಕರೆಸಿಯೂ ಗಮನಾರ್ಹವಾಗಿ ಕೋವಿಡ್ ನಿಯಂತ್ರಣ ಕ್ರಮಗಳನ್ನು ಅನುಸರಿಸಿರುವ ಕೇರಳವನ್ನು ಭಾರತೀಯ ವಿದೇಶಾಂಗ ಇಲಾಖೆ ಶುಕ್ರವಾರ ಶ್ಲಾಘಿಸಿ ಪತ್ರ ಕಳಿಸಿದೆ.
ಈ ಮಧ್ಯೆ ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಮುರಲೀಧರನ್ ಅವರು ರಾಜ್ಯ ಸರ್ಕಾರವು ವಿದೇಶಗಳಲ್ಲಿ ನೆಲಸಿರುವ ಕೇರಳೀಯರನ್ನು ಕರೆತರುವಲ್ಲಿ ಎಲ್ಲಿಲ್ಲದ ಅವಸರ ತೋರಿಸುತ್ತಿದೆ ಎಂದು ಟೀಕಿಸಿರುವಂತೆಯೇ ವಿದೇಶಾಂಗ ಇಲಾಖೆಯ ಪ್ರಶಂಸನೆ ವಿ.ಮುರಳೀಧರನ್ ಅವರ ವಿರುದ್ದ ತಿರುಗಿ ಬೀಳಲು ಒಂದೆಡೆ ಮಾಧ್ಯಮವಾದರೆ ಇನ್ನೊಂದೆಡೆ ಸ್ವತಃ ಜವಾಬ್ದಾರಿ ಹೊಂದಿರುವ ಇಲಾಖೆಯಿಂದಲೇ ಇಂತಹದೊಂದು ಪ್ರಶಂಸೆ ವ್ಯಕ್ತವಾಗಿರುವುದು ಮುರಳೀಧರನ್ ಅವರ ಮುಖಭಂಗಕ್ಕೂ ಕಾರಣವಾಗಿದೆ.
ವಲಸಿಗರನ್ನು ಹಿಂದಿರುಗಿಸುವ ಉಸ್ತುವಾರಿ ಹೊಂದಿರುವ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಅಭಿನಂದನಾ ಪತ್ರವನ್ನು ಕಳುಹಿಸಿದ್ದಾರೆ. ರಾಜ್ಯದ ಅವಶ್ಯಕತೆಗಳನ್ನು ನೇರವಾಗಿ ವಿಮಾನಯಾನ ಸಂಸ್ಥೆಗೆ ತಿಳಿಸಲಾಗುವುದು ಎಂದು ಪತ್ರದಲ್ಲಿ ತಿಳಿಸಲಾಗಿದೆ. ವಿದೇಶಾಂಗ ಸಚಿವಾಲಯವು ರಾಯಭಾರಿಗಳ ಸಹಕಾರಕ್ಕೂ ಭರವಸೆ ನೀಡಿದೆ.
ವಿ ಮುರಲೀಧರನ್ ರಾಜ್ಯ ಸರ್ಕಾರದ ವಿರುದ್ಧ ಕಳೆದ ಕೆಲವು ದಿನಗಳಿಂದ ವ್ಯಾಪಕ ಟೀಕೆಗಳನ್ನು ನಡೆಸುತ್ತಿದ್ದು ಕೇರಳಕ್ಕೆ ಮಾತ್ರವಾಗಿ ವಲಸಿಗರನ್ನು ಕರೆತರಲು ಪ್ರತ್ಯೇಕ ವ್ಯವಸ್ಥೆಗಳನ್ನು ಏರ್ಪಡಿಸಲು ಸಾಧ್ಯವಿಲ್ಲ ಎಂದಿದ್ದರು.


