ಬೆಂಗಳೂರು: ದೇಶದ ಮೊದಲ ಆರು ಹಂತದ ರೈಲ್ ಕಮ್ ರೋಡ್ ಫ್ಲೈ ಓವರ್ ಮತ್ತು ನಮ್ಮ ಮೆಟ್ರೋ ರೈಲು ಯೋಜನೆ ಕಾಮಗಾರಿಗೆ ನಿಗದಿಪಡಿಸಲಾದ ಗಡುವನ್ನು ಆರು ತಿಂಗಳ ಕಾಲ ವಿಸ್ತರಿಸಲಾಗಿದ್ದು, ಮುಂದಿನ ವರ್ಷದ ಡಿಸೆಂಬರ್ ವೇಳೆಗೆ ಸಿದ್ಧವಾಗುವ ಸಾಧ್ಯತೆ ಇದೆ. ಕೋವಿಡ್-19 ಲಾಕ್ ಡೌನ್ ಹಾಗೂ ವಲಸೆ ಕಾರ್ಮಿಕರು ಅವರವರ ಊರುಗಳಿಗೆ ತೆರಳಿರುವುದರಿಂದ ಕಾಮಗಾರಿ ವಿಳಂಬವಾಗುತ್ತಿದೆ.
ನಮ್ಮ ಮೆಟ್ರೋ ಎರಡನೇ ಹಂತದ ರೀಚ್-5 ಕಾಮಗಾರಿಯನ್ನು ಮೂರು ಪ್ಯಾಕೇಜ್ ಗಳಾಗಿ ವಿಂಗಂಡಿಸಿದ್ದು, ಫ್ಲೈ ಓವರ್ 35 ಮೀಟರ್ ಎತ್ತರಕ್ಕೆ ಏರಲಿದೆ ಹಾಗೂ 43 ಮೀಟರ್ ಅಗಲವನ್ನು ಹೊಂದಿರಲಿದೆ ಎಂದು ಉಪ ಮುಖ್ಯ ಎಂಜಿನಿಯರ್ ಎನ್ . ಸದಾಶಿವ ತಿಳಿಸಿದ್ದಾರೆ.ಫ್ಲೈಓವರ್ ಆರು ಹಂತಗಳನ್ನು ಹೊಂದಿದ್ದು, ಅಂಡರ್‍ಪಾಸ್ ಅನ್ನು ನೆಲಮಟ್ಟಕ್ಕಿಂತ ಕೆಳಗಡೆ ನಿರ್ಮಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಬನ್ನೇರುಘಟ್ಟ ರಸ್ತೆಯಿಂದ ಡೈರಿ ವೃತ್ತದವರೆಗಿನ ಎರಡು ಲೇನ್ ಗಳ ಅಂಡರ್ ಪಾಸ್ ನಲ್ಲಿ ದ್ವಿಮುಖ ಸಂಚಾರಕ್ಕೆ ಅನುಮತಿ ನೀಡಲಾಗುವುದು, ಆರ್ ವಿ ರಸ್ತೆ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ನಡುವಣ ನಾಲ್ಕು ಲೇನ್ ಗಳ ಮೇಲ್ಮಟ್ಟದ ರಸ್ತೆ ನಿರ್ಮಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ರಾಗಿಗುಡ್ಡ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ನಡುವಣೆ 3.2 ಕಿಲೋ ಮೀಟರ್ ಉದ್ಧದ ಫ್ಲೈ ಓವರ್ ಬರಲಿದ್ದು, ಜಯನಗರದಲ್ಲಿ ಇಂಟರ್ ಚೆಂಜ್ ಮೆಟ್ರೋ ನಿಲ್ದಾಣ ಇರಲಿದೆ. ರೀಚ್ 5 ಆರ್ ವಿ ರಸ್ತೆ ಮತ್ತು ಎಲೆಕ್ಟ್ರಾನಿಕ್ ಸಿಟಿಯನ್ನು ಸಂಪರ್ಕಿಸಿದರೆ, ರೀಚ್ 6 ಬನ್ನೇರುಘಟ್ಟ ಮತ್ತು ನಾಗವಾರವನ್ನು ಸಂಪರ್ಕಿಸಲಿದೆ.
ರೀಚ್ 3 ಮೂರನೇ ಪ್ಯಾಕೇಜ್ ಗೆ 797 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಇದರಲ್ಲಿ ಆರ್ ವಿ ರಸ್ತೆಯಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ವರೆಗೂ ಐದು ನಿಲ್ದಾಣಗಳು ಇರಲಿವೆ.ಈ ಯೋಜನೆಯನ್ನು ಜೂನ್ 2021ಕ್ಕೆ ಮುಗಿಸಲು ಗಡುವು ನೀಡಲಾಗಿತ್ತು. ಆದರೆ, ಕೋವಿಡ್ ಕಾರಣದಿಂದಾಗಿ ಕಾಮಗಾರಿ ವಿಳಂಬವಾಗಿದ್ದು, 2012 ಡಿಸೆಂಬರ್ ತಿಂಗಳಿಗೆ ಮುಗಿಯುವ ಸಾಧ್ಯತೆ ಇರುವುದಾಗಿ ಸದಾಶಿವ ತಿಳಿಸಿದ್ದಾರೆ.


