ಕಾಸರಗೋಡು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳು ಒಂದಲ್ಲ ಒಂದು ರೀತಿಯಲ್ಲಿ ಸಾಮಾನ್ಯ ಜನರಿಗೆ ನೆರವಾಗುತ್ತಿದೆ. ಬದುಕು ಕಟ್ಟಿಕೊಳ್ಳುವಲ್ಲಿ, ಬದುಕಿನ ನೆಮ್ಮದಿಯನ್ನು ಕಾಣುವಲ್ಲಿ ಸರಿಯಾದ ಮಾರ್ಗದರ್ಶನ ಹಾಗೂ ಪೂರಕವಾದ ಅವಕಾಶಗಳನ್ನು ಒದಗಿಸುವ ಮೂಲಕ ಇಂದು ಮನೆ ಮಾತಾಗಿದೆ. ಉತ್ತಮ ಯೋಜನೆಗಳು, ಆರೋಗ್ಯವಂತ ಸಮಾಜಕ್ಕಾಗಿ ವಿವಿಧ ಶಿಬಿರಗಳ ಮೂಲಕ ಅತ್ಯುತ್ತಮ ಕೊಡುಗೆಯನ್ನು ನೀಡುತ್ತಿದ್ದು ಇಂದು ಈ ಕೋವಿಡ್-19 ಜನಜೀವನಕ್ಕೆ ಸವಾಲಾಗಿರುವಾಗ ಸಹಾಯಕವಾಗಿ ನಿಲ್ಲಲು ಎಲ್ಲಾ ರೀತಿಯಲ್ಲೂ ಪ್ರಯತ್ನಿಸುತ್ತಿರುವ ಸರ್ಕಾರಕ್ಕೂ ಒಂದೊಳ್ಳೆ ಮೊತ್ತವನ್ನು ನೀಡಿ ಸತ್ಕಾರ್ಯದಲ್ಲಿ ಕೈ ಜೋಡಿಸುತ್ತಿರುವುದು ಮಾದರಿಯಾಗಿದೆ ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್ ಹೇಳಿದರು.
ಅವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಕಾಸರಗೋಡು ಜಿಲ್ಲೆ ಇದರ ವತಿಯಿಂದ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಂತೆ ಆಹಾರ ಸಾಮಾಗ್ರಿಗಳ ವಿತರಣೆ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಮೊತ್ತ ಹಸ್ತಾಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕೋವಿಡ್-19 ನಿರ್ಮೂಲನಾ ಕಾರ್ಯಕ್ರಮದಡಿಯಲ್ಲಿ ಜಿಲ್ಲೆಯ 250 ಕುಟುಂಬಗಳಿಗೆ ರೂ.1,50,000 ಮೊತ್ತದ ಆಹಾರ ಸಾಮಾಗ್ರಿಗಳ ಕಿಟ್ ಪೂರೈಕೆ ಮಾಡಲಾಯಿತು. ಜೊತೆಗೆ ಕೋವಿಡ್-19 ತಡೆಗಟ್ಟುವಲ್ಲಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದ ಕೇರಳ ಸರ್ಕಾರಕ್ಕೆ 50,000 ಮೋತ್ತದ ದೇಣಿಗೆಯನ್ನು ಕಂದಾಯ ಸಚಿವ ಇ.ಚಂದ್ರಶೇಖರನ್ ಅವರಿಗೆ ಹಸ್ತಾಂತರಿಸಲಾಯಿತು. ಜೊತೆಗೆ ಜಿಲ್ಲೆಯ ಯೋಜನೆಯ 22628 ಪಾಲುದಾರ ಸದಸ್ಯರಿಗೆ ಕೊರೋನಾ ಮುಂಜಾಗ್ರತಾ ಕ್ರಮದ ಬಗ್ಗೆ ತರಬೇತಿಯನ್ನೂ ನೀಡಲಾಗುತ್ತಿದೆ. ಜಿಲ್ಲೆಯ 123 ಮಂದಿ ನಿರ್ಗತಿಕರಿಗೆ ರೂ.750 ರಂತೆ ಪ್ರತಿ ತಿಂಗಳು ಮಾಸಾಸನವನ್ನೂ ನೀಡುತ್ತಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಅಶ್ವಥ್ ಪೂಜಾರಿ ಲಾಲ್‍ಬಾಗ್, ಯೋಜನಾಧಿಕಾರಿ ಚೇತನಾ.ಯಂ, ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಅಖಿಲೇಶ್ ನಗುಮುಗಂ ಮತ್ತು ಮೇಲ್ವಿಚಾರಕ ಚಂದ್ರಶೇಖರ್ ಉಪಸ್ಥಿತರಿದ್ದರು.

