ಕಾಸರಗೋಡು: ಸುದೀರ್ಘ 29 ವರ್ಷಗಳ ಅಧ್ಯಾಪಕ ಸೇವೆಯ ಬಳಿಕ ಕನ್ನಡ ಮಾಧ್ಯಮ ಅಧ್ಯಾಪಕರಾದ ಕಾಂಞಂಗಾಡು ನಿವಾಸಿ ಜಯಪ್ರಕಾಶ್ ಅವರು ಜಿಲ್ಲಾ ಶಿಕ್ಷಣಾಧಿಕಾರಿಯಾಗಿ ಭಡ್ತಿ ಹೊಂದಿದ್ದಾರೆ. ತಳಿಪರಂಬ ಕಂದಾಯ ಜಿಲ್ಲಾ ಶಿಕ್ಷಣಾ„ಕಾರಿಯಾಗಿ ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಇವರು ಸೇವೆ ಆರಂಭಿಸಿದ್ದಾರೆ.
ಜಯಪ್ರಕಾಶ್ ಅವರು ಕುಂಡಂಗುಯಿ ಹಾಗೂ ಪೈವಳಿಕೆ ಸರಕಾರಿ ಶಾಲೆಯಲ್ಲಿ ತಾತ್ಕಾಲಿಕ ಪ್ರೌಢಶಾಲಾ ಅಧ್ಯಾಪಕರಾಗಿ ಅಧ್ಯಾಪನ ಸೇವೆಗೆ ನಾಂದಿ ಹಾಡಿದ್ದರು. 1991ರಲ್ಲಿ ಲೋಕ ಸೇವಾ ಆಯೋಗದ ಮೂಲಕ ಬಂಗ್ರಮಂಜೇಶ್ವರ ಸರ್ಕಾರಿ ಶಾಲೆಯಲ್ಲಿ ಗಣಿತ ಅಧ್ಯಾಪಕರಾಗಿ ನೇಮಕಗೊಂಡರು.
ಕುಂಡಂಗುಯಿ, ಪೈವಳಿಕೆ ನಗರ, ಬಂಗ್ರಮಂಜೇಶ್ವರ, ಬೇಕಲ ಫಿಶರೀಸ್ ಶಾಲೆಗಳಲ್ಲಿ ಪ್ರೌಢ ಶಾಲಾ ವಿಭಾಗದ ಕನ್ನಡ ಮಾಧ್ಯಮ ಗಣಿತ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಬಳಿಕ ಭಡ್ತಿ ಹೊಂದಿ ಮಾಲೋತ್ ಕಸಬ, ಕಣ್ಣೂರು ಜಿಲ್ಲೆಯ ಕರಿವೆಳ್ಳೂರು ಶಾಲೆ, ಮಡಿಕೈ, ಕುಂಬಳೆ ಶಾಲೆಗಳಲ್ಲಿ ಹೈಯರ್ ಸೆಕೆಂಡರಿ ವಿಭಾಗದ ಗಣಿತ ಅಧ್ಯಾಪಕರಾಗಿ ಅಧ್ಯಾಪನ ಸೇವೆ ಮುಂದುವರಿಸಿದರು. ಬಳಿಕ ಕಾಸರಗೋಡು ಜಿಲ್ಲೆಯ ಪಾಂಡಿ ಶಾಲೆಯ ಮುಖ್ಯೋಪಾಧ್ಯಾಯರಾಗಿ ಭಡ್ತಿ ಹೊಂದಿದ್ದರು. ಮೂಡಂಬೈಲು ಪ್ರೌಢಶಾಲೆಯ ಪ್ರಪ್ರಥಮ ಮುಖ್ಯೋಪಾಧ್ಯಾಯರು ಎಂಬ ಖ್ಯಾತಿ ಇವರಿಗೆ ಸಲ್ಲುತ್ತದೆ. ಮೂಡಂಬೈಲು ಶಾಲೆಯ ಸ್ಥಳ ನೋಂದಾವಣೆ, ಪರೀಕ್ಷಾ ಕೇಂದ್ರದ ಮಂಜೂರಾತಿ, ಶಾಲೆಯ ನೂತನ ಕಟ್ಟಡದ ಮಂಜೂರಾತಿ ಇತ್ಯಾದಿ ಪ್ರಗತಿ ಕಾರ್ಯಗಳಿಗೆ ಮುತುವರ್ಜಿ ನೀಡಿದರು. ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶಾಲೆಗೆ ನೂರು ಶೇಕಡಾ ಫಲಿತಾಂಶ ಲಭಿಸುವಲ್ಲಿ ಯಶಸ್ವಿ ನಾಯಕತ್ವ ವಹಿಸಿದ್ದರು.
2014ರಿಂದ 2020ರ ವರೆಗೆ ಬೇಕಲ ಫಿಶರೀಸ್ ಶಾಲೆಯ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದ ಇವರಿಗೆ ಪ್ರಸ್ತುತ ತಳಿಪರಂಬ ಜಿಲ್ಲಾ ಶಿಕ್ಷಣಾ„ಕಾರಿಯಾಗಿ ಹುದ್ದೆ ಭಡ್ತಿ ಲಭಿಸಿದೆ. ಮಲೆಯಾಳಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಬೇಕಲ ಫಿಶರೀಸ್ ಶಾಲೆಯಲ್ಲಿ ಕನ್ನಡ ಮಾಧ್ಯಮ ತರಗತಿಗಳು ಕಾರ್ಯಾಚರಿಸುತ್ತಿವೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ನೂರು ಶೇ. ಫಲಿತಾಂಶ ಗಳಿಸಲು ಹಾಗೂ ಶಾಲೆಯ ಹೆಚ್ಚಿನ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆಯಲು ಜಯಪ್ರಕಾಶ್ ಅವರು ಪೆÇ್ರೀತ್ಸಾಹ ನೀಡುತ್ತಿದ್ದಾರೆ. ಬೇಕಲ ಫಿಶರೀಸ್ ಶಾಲೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಯೋಜನೆಯಡಿ ಹೈಟೆಕ್ ಶಾಲೆಯನ್ನಾಗಿಸಲು ಊರವರ ಸಹಕಾರದಿಂದ ಪ್ರಯತ್ನಿಸಿದ್ದರು. ಕನ್ನಡಿಗರಾದ ಇವರು ಐದು ಭಾಷೆಗಳಲ್ಲಿ ಪ್ರಾವೀಣ್ಯತೆ ಹೊಂದಿದ್ದು ಹಲವಾರು ಕನ್ನಡಪರ ಚಟುವಟಿಕೆಗಳನ್ನು ನಡೆಸಿದ್ದಾರೆ. ಜಯಪ್ರಕಾಶ್ ಕಾಂಞಂಗಾಡು ಅವರು ಜಿಲ್ಲಾ ಶಿಕ್ಷಣಾಧಿಕಾರಿಯಾಗಿ ಭಡ್ತಿ ಹೊಂದಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.


