ಕಾಸರಗೋಡು: ಜಿಲ್ಲಾ ಕುಟುಂಬಶ್ರೀ ಮಿಷನ್ ನೇತೃತ್ವದಲ್ಲಿ ಮಳೆಗಾಲದಲ್ಲಿ ಕೃಷಿ ಉತ್ಸವ ನಡೆಸುವ ಮಳೆ ಉತ್ಸವ ಅಭಿಯಾನ ಕಾಸರಗೋಡು ಜಿಲ್ಲೆಯಲ್ಲಿ ಆರಂಭಗೊಂಡಿದೆ. ಬಂಜರುಭೂಮಿಯನ್ನು ಕೃಷಿಗೆ ಪೂರಕವಾಗಿಸುವ, ಯುವಜನತೆಯನ್ನು ಕೃಷಿಯತ್ತ ಮನಮಾಡುವಂತೆ ಪ್ರೇರೇಪಿಸುವ, ಜಿಲ್ಲೆಯ ಕೃಷಿ ಸಂಸ್ಕøತಿಯನ್ನು ಮರಳಿ ತರುವ ಇತ್ಯಾದಿ ಉದ್ದೇಶದೊಂದಿಗೆ ಕುಟುಂಬಶ್ರೀ ಜಿಲ್ಲಾ ಮಿಷನ್ ಮಳೆಉತ್ಸವ ಕಾರ್ಯಕ್ರಮವನ್ನು ನಡೆಸುತ್ತಿದೆ. 2017ರಿಂದ ಸತತವಾಗಿ ಪ್ರತಿವರ್ಷ ಈ ಅಭಿಯಾನ ಕುಂಬಳೆ, ಮುಳಿಯಾರು, ಪಳ್ಳಿಕ್ಕರೆ, ಚೆಮ್ನಾಡು, ಅಜಾನೂರು, ವಲಿಯಪರಂಬ, ತ್ರಿಕರಿಪುರ, ಕಿನಾನೂರು-ಕರಿಂದಳಂ ಗ್ರಾಮಪಂಚಾಯತ್ ಗಳ ಬಯಲುಗಳಲ್ಲಿ ನೇಜಿ ನಡೆಉವ ಹಾಡುಗಳು, ಪಾಡದನ ಇತ್ಯಾದಿಗಳ ಜೊತೆ ಕೃಷಿ ನಡೆಸಲಾಗುತ್ತಿದೆ.
ಜಿಲ್ಲೆಯಲ್ಲಿ ಈ ಮೂಲಕ ಈಗಾಗಲೇ 930 ಎಕ್ರೆ ಬಂಜರುಭೂಮಿಯನ್ನು ಕೃಷಿಯೋಗ್ಯ ವಾಗಿಸಲಾಗಿದೆ. ಜೊತೆಗೆ ಮಳೆನೀರು ಇಂಗಿಸುವಿಕೆಯೂ ಈ ಕಾರ್ಯಕ್ರಮದ ಮೂಲಕ ನಡೆಯುತ್ತಿದೆ. ಕಳೆದ ವರ್ಷಗಳಲ್ಲಿ ನಡೆಸಲಾದ ಮಳೆಉತ್ಸವದಲ್ಲಿ 1254 ಹೆಕ್ಟೇರ್ ಬಯಲುಗಳಲ್ಲಿ ಕೃಷಿ ನಡೆಸಲಾಗಿದೆ. 123,89,20,999 ಲೀ. ಮಳೆನೀರು ಭೂಮಿಗಿಳಿಯುವಂತೆ ಮಾಡಲಾಗಿದೆ. ಜಿಲ್ಲೆಯ ಭೂಪ್ರಕೃತಿಗನುಸಾರ ನೇರ ಹರಿದು ಕಡಲಿಗೆ ಸೇರುತ್ತಿದ್ದ ಮಳೆನೀರನ್ನು ಇಂಗಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. ಗದ್ದೆಗಳ ಮೂಲಕ ನೀರು ಇಂಗಿಸಲಾಗುತ್ತಿದೆ. ಈ ಮೂಲಕ ಈ ಪ್ರದೇಶಗಳ ಬಾವಿ, ಕೆರೆ ಸಹಿತ ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಿದೆ.
ಮಳೆ ಉತ್ಸವ ಮೂಲಕ ಬೆಳೆಯಲಾಗುವ ವಿಶೇಷ ಅಕ್ಕಿ "ಅರಿಶ್ರೀ" ಬ್ರಾಂಡ್ ಮೂಲಕ ಮಾರುಕಟ್ಟೆಗೆ ತಲಪುತ್ತಿದೆ. ಈಗಾಗಲೇ ಒಟ್ಟು 105.85 ಟನ್ ಅಕ್ಕಿ ಈ ಮೂಲಕ ಮಾರುಕಟ್ಟೆ ತಲಪಿದೆ. 28, 57.500 ರೂ. ಆದಾಯ ಈ ನಿಟ್ಟಿನಲ್ಲಿ ಲಭಿಸಿದೆ. ಸುಮಾರು 6 ಸಾವಿರ ಜಾಯಿಂಟ್ ಲಯಾಬಿಲಿಟಿ ಗ್ರೂಪ್ ಸದಸ್ಯರಿಗೆ ಕೃಷಿ ಉತ್ತಮ ಆದಾಯ ತಂದುಕೊಡುತ್ತಿದೆ.
ತರಕಾರಿ, ಗೆಡ್ಡೆ, ಬಾಳೆ ಕೃಷಿಗೂ ಆದ್ಯತೆ ನೀಡಿ ಕುಟುಂಬಶ್ರೀ ರಂಗದಲ್ಲಿದೆ. ಎಲ್ಲ ಗ್ರಾಮಪಂಚಾಯತ್ ಗಳಲ್ಲೂ ಕುಟುಂಬಶ್ರೀ ನೇತೃತ್ವದಲ್ಲಿ ವಾರದ ಸಂತೆ ನಡೆಸಿ ಮತ್ತು ಕೃಷಿ ಮಾರಾಟ ಕೇಂದ್ರಗಳಿಗೆ ತಲಪಿಸಿ ಈ ಮೂಲಕ ಬೆಳೆಯುವ ಉತ್ಪನ್ನಗಳನ್ನು ಜನತೆಗೆ ತಲಪಿಸಲಾಗುತ್ತಿದೆ.
ಎಲ್ಲ ವಿಚಾರಗಳಿಗಿಂತಲೂ ಅಧಿಕವಾಗಿ ಜೈವಿಕ ಕೃಷಿ ನಡೆಸುವ ಮೂಲಕ ನಾಡಿಗೆ ವಿಷ ರಹಿತ ಆಹಾರ ಒದಗಿಸುವಲ್ಲಿ ಮಳೆಉತ್ಸವ ಕಾರ್ಯಕ್ರಮ ಯಶಸ್ವಿಯಾಗಿದೆ. ಸಾಮಾಜಿಕ ಏಕತೆಯಲ್ಲೂ ದೊಡ್ಡ ಯೋಗದಾನ ನೀಡುತ್ತಿದೆ. ರಾಜ್ಯ ಸರಕಾರದ ಸುಭಿಕ್ಷ ಕೇರಳಂ ಯೋಜನೆಗೂ ಹೆಗಲು ನೀಡುತಿದೆ.


