HEALTH TIPS

ಭಾರತದಲ್ಲಿ ದೇವಸ್ಥಾನ, ಮಂದಿರ, ಚರ್ಚ್ ಪ್ರವೇಶಕ್ಕೆ ಹೊಸ ರೂಲ್ಸ್!

          ನವದೆಹಲಿ: ಭಾರತದಲ್ಲಿ ನೊವೆಲ್ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ದಿನಂಪ್ರತಿ ಏರಿಕೆಯಾಗುತ್ತಲೇ ಇವೆ. ಭಾರತದಲ್ಲಿ 5ನೇ ಬಾರಿ ಲಾಕ್ ಡೌನ್ ವಿಸ್ತರಿಸಿದ ಕೇಂದ್ರ ಸರ್ಕಾರವು ಬಹುತೇಕ ಎಲ್ಲ ವಲಯಗಳಿಗೂ ಬಿಗ್ ರಿಲೀಫ್ ನೀಡಿದೆ.
        ದೇಶಾದ್ಯಂತ ಜೂನ್.8ರಿಂದ ದೇವಸ್ಥಾನ, ಮಸೀದಿ ಮತ್ತು ಚರ್ಚ್ ಗಳು ಸೇರಿದಂತೆ ಎಲ್ಲ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಆದರೆ ಧಾರ್ಮಿಕ ಕೇಂದ್ರಗಳಲ್ಲಿ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಿದೆ.
   ಕೇಂದ್ರ ಗೃಹ ಸಚಿವಾಲಯದ ಈ ಕುರಿತು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಜೂನ್ 8ರಿಂದ ಎಲ್ಲ ರಾಜ್ಯಗಳಲ್ಲಿಯೂ ತೆರೆಯಲಿರುವ ದೇವಾಲಯ, ಚರ್ಚ್, ಮಸೀದಿ ಹಾಗೂ ಪ್ರಾರ್ಥನಾ ಮಂದಿರಗಳಲ್ಲಿ ಪಾಲನೆ ಮಾಡಬೇಕಾದ ನಿಯಮಗಳ ಬಗ್ಗೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
      ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಡ್ಡಾಯ ದೇವಸ್ಥಾನ, ಮಸೀದಿ, ಚರ್ಚ್ ಹಾಗೂ ಪ್ರಾರ್ಥನಾ ಮಂದಿರಗಳು ಸೇರಿದಂತೆ ಎಲ್ಲ ಧಾರ್ಮಿಕ ಕೇಂದ್ರಗಳಲ್ಲಿ ಅತಿಹೆಚ್ಚು ಸಾರ್ವಜನಿಕರು ಒಂದು ಕಡೆಗಳಲ್ಲಿ ಸೇರದಂತೆ ಎಚ್ಚರಿಕೆ ವಹಿಸುವುದು. ಪ್ರತಿಯೊಬ್ಬರ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
     ಕಂಟೇನ್ಮೆಂಟ್ ಝೋನ್ ಗಳಲ್ಲಿ ತೆರೆಯಲ್ಲ ಧಾರ್ಮಿಕ ಕೇಂದ್ರ ಕೊರೊನಾ ವೈರಸ್ ಸೋಂಕು ಹರಡದಂತೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಇದರ ಜೊತೆಗೆ ಕಂಟೇನ್ಮೆಂಟ್ ಝೋನ್ ಗಳಿಂದ ಹೊರಭಾಗಗಳಲ್ಲಿ ಮಾತ್ರ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಕಂಟೇನ್ಮೆಂಟ್ ಝೋನ್ ಗಳಲ್ಲಿ ಮೊದಲಿನಂತೆ ಧಾರ್ಮಿಕ ಕೇಂದ್ರಗಳು ಬಂದ್ ಆಗಿರಲಿವೆ ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.
      ಗರ್ಭಿಣಿಯರು, ಮಕ್ಕಳು, ವೃದ್ಧರಿಗೆ ಸುರಕ್ಷತೆಯ ಪಾಠ ಧಾರ್ಮಿಕ ಕೇಂದ್ರಗಳನ್ನು ತೆರೆದಿದ್ದರೂ ಮಕ್ಕಳು, ಗರ್ಭಿಣಿಯರು ಹಾಗೂ ವೃದ್ಧರು ಮನೆಗಳಿಂದ ಹೊರಬಾರದಂತೆ ಎಚ್ಚರಿಕೆ ವಹಿಸಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. 65 ವರ್ಷದ ಮೇಲ್ಮಟ್ಟ ವೃದ್ಧರು, ಗರ್ಭಿಣಿಯರು ಹಾಗೂ 10 ವರ್ಷಕ್ಕಿಂತ ಪುಟ್ಟ ಮಕ್ಕಳನ್ನು ಧಾರ್ಮಿಕ ಕೇಂದ್ರಗಳಿಗೆ ಬಾರದಂತೆ ಸೂಚನೆ ನೀಡಲಾಗಿದೆ.

      ಧಾರ್ಮಿಕ ಕೇಂದ್ರಗಳಲ್ಲಿ ಸಾಮಾನ್ಯ ನಿಯಮ ಪಾಲನೆ ಅತ್ಯಗತ್ಯ - ಧಾರ್ಮಿಕ ಕೇಂದ್ರದ ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ರೀನಿಂಗ್ ಹಾಗೂ ಸ್ಯಾನಿಟೈಸರ್ ನಿಂದ ಕೈ ತೊಳೆದುಕೊಳ್ಳುವುದು ಕಡ್ಡಾಯ. - ಕೊರೊನಾ ವೈರಸ್ ಸೋಂಕಿತ ಲಕ್ಷಣಗಳಿಲ್ಲದ ವ್ಯಕ್ತಿಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶ. - ಮುಖಕ್ಕೆ ಬಟ್ಟೆ ಮತ್ತು ಮಾಸ್ಕ್ ಧರಿಸಿದವರಿಗೆ ಮಾತ್ರ ಪ್ರವೇಶಿಸಲು ಅನುಮತಿ. - ಧಾರ್ಮಿಕ ಕೇಂದ್ರಗಳಲ್ಲಿ ಕೊರೊನಾ ವೈರಸ್ ಸೋಂಕು ಹರಡುವಿಕೆಯಿಂದ ದೂರವಿರಲು ಅನುಸರಿಸಬೇಕಾದ ಸಾಮಾನ್ಯ ನಿಯಮಗಳ ಬಗ್ಗೆ ಪೋಸ್ಟರ್, ಬ್ಯಾನರ್ ಗಳನ್ನು ಹಾಕುವುದು. ಸಾಧ್ಯವಾದಲ್ಲಿ ನಿಯಮಗಳ ಕುರಿತು ಆಡಿಯೋ ರೆಕಾರ್ಡ್ ಗಳನ್ನು ಹಾಕುವುದು. - ಚಪ್ಪಲಿ ಮತ್ತು ಶೂಗಳನ್ನು ತಮ್ಮ ಸ್ವಂತ ವಾಹನಗಳಲ್ಲಿ ಬಿಡುವುದು. ಇಲ್ಲದಿದ್ದರೆ ಪ್ರತಿಯೊಬ್ಬರು ಧರಿಸಿದ ಪಾದರಕ್ಷೆಗಳನ್ನು ಪ್ರತ್ಯೇಕವಾಗಿ ಇರಿಸುವುದು. - ವಾಹನ ನಿಲುಗಡೆ ಪ್ರದೇಶಗಳಲ್ಲೂ ಕೂಡಾ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ವ್ಯವಸ್ಥೆ ಕಲ್ಪಿಸುವುದು. ಜನದಟ್ಟಣೆ ಸೇರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು. - ಧಾರ್ಮಿಕ ಕೇಂದ್ರಗಳ ಸುತ್ತಮುತ್ತಲಿನಲ್ಲಿ ಇರುವ ಅಂಗಡಿ, ಕ್ಯಾಂಟೀನ್ ಗಳಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಲಕ್ಷ್ಯ ವಹಿಸುವುದು. - ದೇವರ ದರ್ಶನಕ್ಕೆ ಸಾಲುಗಟ್ಟಿ ನಿಲ್ಲುವ ಸಂದರ್ಭದಲ್ಲಿ ಭಕ್ತರ ನಡುವೆ ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳುವುದು. - ಧಾರ್ಮಿಕ ಕೇಂದ್ರಗಳಲ್ಲಿ ಪ್ರವೇಶ ದ್ವಾರ ಮತ್ತು ನಿರ್ಗಮನ ದ್ವಾರಗಳು ಪ್ರತ್ಯೇಕವಾಗಿರುವಂತೆ ವ್ಯವಸ್ಥೆ ಕಲ್ಪಿಸುವುದು. - ಧಾರ್ಮಿಕ ಕೇಂದ್ರಗಳನ್ನು ಪ್ರವೇಶಿಸುವ ಮುನ್ನ ಭಕ್ತರು ಕೈ ಮತ್ತು ಕಾಲುಗಳನ್ನು ಸೋಪಿನಿಂದ ತೊಳೆದುಕೊಳ್ಳುವುದು. - ಕುಳಿತುಕೊಳ್ಳುವ ಅವಕಾಶವಿದ್ದಲ್ಲಿ ಭಕ್ತರ ನಡುವೆ ಅಂತರ ಕಾಯ್ದುಕೊಳ್ಳವ ನಿಟ್ಟಿನಲ್ಲಿ ವ್ಯವಸ್ಥೆಯನ್ನು ಕಲ್ಪಿಸುವುದು. - ದೇಗುಲಗಳಲ್ಲಿ ದೇವರ ಮೂರ್ತಿ ಹಾಗೂ ಧಾರ್ಮಿಕ ಪುಸ್ತಕಗಳನ್ನು ಕೈಗಳಿಂದ ಮುಟ್ಟುವುದಕ್ಕೆ ಅವಕಾಶವಿಲ್ಲ. - ಧಾರ್ಮಿಕ ಭಜನೆ ಪದಗಳನ್ನು ಆಡಿಯೋವನ್ನು ಪ್ರಸಾರ ಮಾಡಲು ಅವಕಾಶ ನೀಡಲಾಗಿದೆ. ಇದರ ಬದಲು ಯಾವುದೇ ರೀತಿ ಭಜನಾ ಮಂಡಳಿಯ ಸದಸ್ಯರಿಗೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವುದಕ್ಕೆ ಅನುಮತಿ ಇರುವುದಿಲ್ಲ. - ಧಾರ್ಮಿಕ ಕೇಂದ್ರಗಳಲ್ಲಿ ಯಾವುದೇ ರೀತಿಯ ತೀರ್ಥ ಮತ್ತು ಪ್ರಸಾದವನ್ನು ವಿತರಿಸುವಂತಿಲ್ಲ. - ಕೊರೊನಾ ವೈರಸ್ ಸೋಂಕು ಹರಡದಂತೆ ಧಾರ್ಮಿಕ ಕೇಂದ್ರಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು.
      ಸೋಂಕಿತ ಧಾರ್ಮಿಕ ಕೇಂದ್ರಗಳಲ್ಲಿ ಕಂಡು ಬಂದರೇನು ಗತಿ? - ಧಾರ್ಮಿಕ ಕೇಂದ್ರಗಳಲ್ಲಿ ಒಬ್ಬರಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದಲ್ಲಿ ಸ್ಥಳದಲ್ಲಿರುವ ಎಲ್ಲರನ್ನೂ ಐಸೋಲೇಷನ್ ನಲ್ಲಿ ಇರಿಸುವುದು. - ಮುಖಕ್ಕೆ ಬಟ್ಟೆ ಅಥವಾ ಮಾಸ್ಕ್ ಗಳನ್ನು ನೀಡುವುದು ಹಾಗೂ ವೈದ್ಯರಿಂದ ತಪಾಸಣೆಗೆ ಒಳಪಡಿಸುವುದು. - ತಕ್ಷಣ ಹತ್ತಿರದ ಆಸ್ಪತ್ರೆಗೆ ಅಥವಾ ಜಿಲ್ಲಾ ಮತ್ತು ರಾಜ್ಯ ಸರ್ಕಾರದ ಸಹಾಯವಾಣಿಗೆ ಮಾಹಿತಿ ನೀಡುವುದು. - ಸೋಂಕಿತನ ಜೊತೆಗೆ ಸಂಪರ್ಕರದಲ್ಲಿದ್ದ ಜನರನ್ನೂ ಕೂಡಾ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತದೆ. - ಸೋಂಕಿತನ ಜೊತೆಗೆ ಸಂಪರ್ಕ ಹೊಂದಿದ್ದಕ್ಕಾಗಿ ಸೋಂಕು ಇಲ್ಲದಿದ್ದರೂ ಶಂಕೆ ಮೇಲೆ ಐಸೋಲೇಷನ್ ನಲ್ಲಿ ಇರಿಸಲಾಗುತ್ತದೆ.
    ಸಾರ್ವಜನಿಕ ಪ್ರದೇಶಗಳಲ್ಲಿ ಈ ನಿಯಮಗಳ ಪಾಲನೆ ಕಡ್ಡಾಯ - ಪ್ರತಿಯೊಬ್ಬ ವ್ಯಕ್ತಿಯು ಸಾರ್ವಜನಿಕ ಪ್ರದೇಶಗಳಲ್ಲಿ ಕನಿಷ್ಠ 6 ಅಡಿ ಅಂತರವನ್ನು ಕಾಯ್ದುಕೊಂಡಿರಬೇಕು. - ಮುಖಕ್ಕೆ ಬಟ್ಟೆ ಅಥವಾ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. - ಆಗಾಗ ಸೋಪ್ ನಿಂದ ಕನಿಷ್ಠ 40-60 ಸೆಕೆಂಡ್ ಗಳ ಕಾಲ ಕೈತೊಳೆದುಕೊಳ್ಳುವುದನ್ನು ರೂಢಿಸಿಕೊಳ್ಳಬೇಕು. - ಸಾಧ್ಯವಾದಲ್ಲಿ ಆಲ್ಕೋಹಾಲ್ ಅಂಶವುಳ್ಳ ಸ್ಯಾನಿಟೈಸರ್ ನಿಂದ 20 ಸೆಕೆಂಡ್ ಕೈಗಳನ್ನು ತೊಳೆಯಿರಿ. - ಕೆಮ್ಮುವಾಗ, ಸೀನುವಾಗ ಬೇರೆಯವರಿಂದ ಅಂತರ ಕಾಯ್ದುಕೊಳ್ಳಿರಿ ಹಾಗೂ ಕೈ ಹಾಗೂ ಕರ್ಚಿಫ್ ಗಳನ್ನು ಹಿಡಿದುಕೊಳ್ಳಿರಿ. - ಆರೋಗ್ಯದಲ್ಲಿ ಕೊಂಚ ಏರುಪೇರು ಆದರೂ ಜಿಲ್ಲಾ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿರಿ. - ಸಾರ್ವಜನಿಕ ಪ್ರದೇಶಗಳಲ್ಲಿ ಉಗುಳುವುದನ್ನು ನಿರ್ಬಂಧಿಸಲಾಗಿದೆ. - ಎಲ್ಲರೂ ನಿಮ್ಮ ನಿಮ್ಮ ಮೊಬೈಲ್ ನಲ್ಲಿ ಆರೋಗ್ಯ ಸೇತು ಆ್ಯಪ್ ನ್ನು ಡೌನ್ ಲೋಡ್ ಮಾಡಿಕೊಳ್ಳಿ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries