ಮಲಪ್ಪುರಂ: ರಾಜ್ಯದಲ್ಲಿ ಕೋವಿಡ್ ಬಾಧಿಸಿ ಶನಿವಾರ ಮತ್ತೊಂದು ಮರಣ ದೃಢೀಕರಿಸಲಾಗಿದ್ದು ಈ ಮೂಲಕ ರಾಜ್ಯದಲ್ಲಿ ಈವರೆಗೆ 15 ಮಮದಿ ಕೋವಿಡ್ ಬಾಧಿಸಿ ಮೃತಪಟ್ಟಿರುವರು. ಮಲಪ್ಪುರಂ ಮೂಲದ, ಮಾಜಿ ಸಂತೋಷ್ ಟ್ರೋಫಿ ಕ್ರೀಡಾಳು ಎಳಯಿಡತ್ ಹಂಸ ಕೋಯಾ (61) ಮೃತಪಟ್ಟ ದುರ್ದೈವಿ. ಇತ್ತೀಚೆಗೆ ಮುಂಬೈನಿಂದ ಹಿಂದಿರುಗುತ್ತಿದ್ದ ಅವರು ಮಂಜೇರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶನಿವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಸಾವು ಸಂಭವಿಸಿದೆ.
ಮೇ 21 ರಂದು ಮುಂಬೈನಿಂದ ಹಿಂದಿರುಗಿದ್ದ ಹಂಸ ಕೋಯಾಗೆ ಕೋವಿಡ್ ದೃಢಪಟ್ಟಿತ್ತು. ಈ ಮೊದಲು ಕೋಯ ಅವರ ಪತ್ನಿ ಹಾಗೂ ಪುತ್ರನಲ್ಲೂ ರೋಗ ಪತ್ತೆಯಾಗಿತ್ತು. ಜೊತೆಗೆ ಹಂಸ ಕೋಯಾ ಅವರ ಸೊಸೆ, ಇಬ್ಬರು ಮೊಮ್ಮಕ್ಕಳಲ್ಲೂ ವೈರಸ್ ಬಾಧೆ ದೃಢಪಡಿಸಲಾಗಿದೆ. ಎಲ್ಲರೂ ಕ್ವಾರಂಟೈನ್ ನಲ್ಲಿ ಸುರಕ್ಷಿತರಾಗಿರುವರೆಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಹಂಸಕೋಯಾ ಅವರ ಆರೋಗ್ಯ ಹದಗೆಟ್ಟಿತ್ತು. ನಂತರ ವೈದ್ಯಕೀಯ ಮಂಡಳಿಯ ಅನುಮತಿಯೊಂದಿಗೆ ಪ್ಲಾಸ್ಮಾ ಚಿಕಿತ್ಸೆಯನ್ನು ನಡೆಸಲಾಯಿತು. ಅವರು ನ್ಯುಮೋನಿಯಾದಿಂದ ಬಳಲುತ್ತಿದ್ದರು. ಪ್ಲಾಸ್ಮಾ ಚಿಕಿತ್ಸೆ ಪಡೆದ ಬಳಿಕ ಕೇರಳದಲ್ಲಿ ಸಾವನ್ನಪ್ಪಿದ ಮೊದಲ ವ್ಯಕ್ತಿ ಹಂಸಕೋಯಾ ಆಗಿರುವುದು ವೈದ್ಯಕೀಯ ವಿಭಾಗದ ಅಚ್ಚರಿಗೆ ಕಾರಣವಾಗಿದೆ. ಹಂಸಕೋಯಾ ಮುಂಬೈ ಮಹಾನಗರದ ಸನಿಹ ವಾಸಿಸುತ್ತಿದ್ದು ಮುಂಬೈ ಯಲ್ಲಿ ಕೊರೊನಾ ಉಲ್ಬಣಗೊಂಡ ಸಂದರ್ಭ ಇವರಿಗೆ ತಗಲಿರಬೇಕೆಂದು ಅಂದಾಜಿಸಲಾಗಿದೆ.


