ಪೆರ್ಲ/ಮುಳ್ಳೇರಿಯ: ಕೋವಿಡ್ ಕಾರಣ ಮುಚ್ಚಲ್ಪಟ್ಟ ಅಂತರ್ ರಾಜ್ಯ ಗಡಿಗಳ ಪೈಕಿ ಕೆಲವು ಪ್ರಮುಖ ಗಡಿ ರಸ್ತೆಗಳನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಬೇಕೆಂಬ ಆಗ್ರಹದಂತೆ ಬಿಜೆಪಿ ಜಿಲ್ಲಾ ಸಮಿತಿ ಕರ್ನಾಟಕದ ಸಚಿವರೊಂದಿಗೆ ಮಾತುಕತೆ ನಡೆಸಿ ಅಂತರ್ ರಾಜ್ಯ ಹೆದ್ದಾರಿಯ ಗಡಿಗಳಲ್ಲಿ ಹಾಕಿದ್ದ ಮಣ್ಣು ತೆಗೆದು ನಿಬಂಧನೆಗೆ ಅನುಸಾರ ಸಂಚಾರ ಮುಕ್ತಗೊಳಿಸಲಾಗಿದೆ ಎಂಬ ವಿದ್ಯಮಾನ ಇದೀಗ ನಗೆಪಾಟಲಿಗೆ ಈಡಾಗಿದೆ.
ಕಳೆದ ಶನಿವಾರ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ತಾವು ನಡೆಸಿದ ಮಾತುಕತೆಗಳ ಫಲದಿಂದ ಅಂತರ್ ರಾಜ್ಯ ಗಡಿಗಳಾದ ದೇಲಂಪಾಡಿ, ಕಲ್ಲಪ್ಪಳ್ಳಿ ಹಾಗೂ ಎಣ್ಮಕಜೆ ಪಂಚಾಯತಿ ವ್ಯಾಪ್ತಿಯಲ್ಲಿ ಹೆದ್ದಾರಿಗೆ ಹಾಕಲಾಗಿದ್ದ ಮಣ್ಣನ್ನು ತೆಗೆದು ಪಾಸ್ ಮೂಲಕ ಸಂಚರಿಸುವವರಿಗೆ ಅನುಕೂಲವಾಗಲಿದೆ ಎಂಬ ಹೇಳಿಕೆ ಸೋಮವಾರದ ವರೆಗೂ ಈಡೇರದಿರುವುದರಿಂದ ಈ ವಿಷಯ ಪಕ್ಷದ ಕಾರ್ಯಕರ್ತರ ಸಹಿತ ಇತರ ಪಕ್ಷಗಳಲ್ಲೂ ವ್ಯಾಪಕ ಆಕ್ರೋಶ ಮತ್ತು ನಗೆಪಾಟಲಿಗೆ ಈಡಾಗಿದೆ.
ಸೋಮವಾರ ಬೆಳಿಗ್ಗೆಯೇ ಅನೇಕ ಮಂದಿ ಅಂತರ್ ರಾಜ್ಯ ಗಡಿಗಳಾದ ಅಡ್ಕಸ್ಥಳ, ದೇಲಂಪಾಡಿ, ಕಲ್ಲಪ್ಪಳ್ಳಿ, ಆರ್ಲಪದವುಗಳ ಮೂಲಕ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವೇಶಿಸುವ ನಿಟ್ಟಿನಲ್ಲಿ ಪ್ರಯತ್ನಿಸಿದ್ದು ಆದರೆ ಮಣ್ಣು ತೆಗೆಯದಿರುವುದು ಮತ್ತು ಪಾಸ್ ಲಭ್ಯವಾಗದಿರುವುದರಿಂದ ತೀವ್ರ ಹತಾಶೆಗೊಳಗಾಗಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಜಿಲ್ಲಾ ಬಿಜೆಪಿ ಅಧ್ಯಕ್ಷರು ಪ್ರತಿಕ್ರಿಯಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸಲು ಯಾವುದೇ ತೊಂದರೆಗಳಾಗದು. ಆದರೆ ಇಲ್ಲಿಂದ ತೆರಳಲು ಕಾಸರಗೋಡು ಜಿಲ್ಲಾಡಳಿತ ಸಹಕರಿಸುತ್ತಿಲ್ಲ ಎಂದು ಆರೋಪಿಸಿರುವರು.


