ಮಧೂರು: ಮುಂಗಾರು ನಿಧಾನವಾಗಿ ಚುರುಕುಗೊಳ್ಳುತ್ತಿರುವಂತೆ ಬಿರುಸುಗೊಳ್ಳುತ್ತಿರುವ ಅಧಿಕೃತರ ಅನಾಸ್ಥೆ ಕಾರಣ ಮಳೆ ಅಲ್ಲಲ್ಲಿ ಸಾರ್ವಜನಿಕರ ಜೀವನದಲ್ಲಿ ವ್ಯತಿರಿಕ್ತ ಪರಿಣಾಮ ಬೀರತೊಡಗಿರುವುದು ಕಂಡುಬಂದಿದೆ.
ವಿದ್ಯಾನಗರ-ಸೀತಾಂಗೋಳಿ ರಸ್ತೆಗೆ ಕಳೆದ ಬೇಸಗೆಯಲ್ಲಿ ಮರು ಡಾಮರೀಕರಣ ನಡೆಸಲಾಗಿದ್ದು, ಕಾಮಗಾರಿಯ ಲೋಕಗಳು ಇದೀಗ ಬಹಿರಂಗಗೊಳ್ಳತೊಡಗಿದೆ. ಈ ರಸ್ತೆಯ ಮಧೂರ್ ಕ್ರಾಸ್ ಉಳಿಯತ್ತಡ್ಕದಿಂದ ಪಳ್ಳ ಪರಿಸರದ ವರೆಗಿನ ಸುಮಾರು ಒಂದು ಕಿಲೋಮೀಟರ್ ರಸ್ತೆಯ ಮೇಲೆ ಮಳೆನೀರು ಕಟ್ಟಿನಿಂತು ಸಂಚಾರಕ್ಕೆ ತೊಂದರೆಯಾಗುವುದಾಗಿ ದೂರಲಾಗಿದೆ. ಒಳಚರಂಡಿ ನಿರ್ಮಿಸಲಾಗಿದ್ದು ಅಸಮರ್ಪಕ ನಿರ್ಮಾಣದಿಂದ ಮಳೆ ನೀರು ರಸ್ತೆಯಲ್ಲಿ ಮಡಗಟ್ಟಿನಿಂತು ವಾಹನಗಳ ಸಂಚಾರಕ್ಕೆ ತೊಡಕಾಗುತ್ತಿದೆ.
ವೇಗವಾಗಿ ಸಾಗುವ ವಾಹನಗಳು ನೀರ ಮೇಲಿಂದ ಸಂಚರಿಸುವುದರಿಂದ ಆಚೀಚೆ ಬದಿಗಳಿಗೆ ಸಿಂಪಡಣೆಯಾಗುವ ಜೊತೆಗೆ ಹೊಸ ರಸ್ತೆಯಾಗಿರುವುದರಿಂದ ನಯವಾಗಿರುವ ರಸ್ತೆಯಲ್ಲಿ ವಾಹನಗಳು ಜಾರುವಿಕೆಗೊಳಗಾಗಿ ಅಪಘಾತಗಳಿಗೆ ಕಾರಣವಾಗುವ ಸಾಧ್ಯತೆ ಇದೆ.
ಅಧಿಕೃತರು ಒಳಚರಂಡಿಗಳ ಮೂಲಕ ರಸ್ತೆಯಲ್ಲಿ ನೀರು ಹರಿಯದಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.


