ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿ ಕಜಂಪಾಡಿ ವಾರ್ಡಿನ ಸರ್ಪಮಲೆ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ವಾಸವಾಗಿರುವ ಬಾಬು ಹಾಗೂ ಕುಸುಮ ದಂಪತಿಗಳ ಮಕ್ಕಳಾದ ಪ್ರಣಮ್ಯ ಮತ್ತು ಪ್ರಮೋದ್ ಇಬ್ಬರೂ ಪೆರ್ಲದ ಸತ್ಯನಾರಾಯಣ ಪ್ರೌಢಶಾಲೆಯ ನಾಲ್ಕನೇ ಹಾಗೂ ಎರಡನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಕೋವಿಡ್-19 ನಿಯಮಗಳ ಪ್ರಕಾರ ಆನ್ ಲೈನ್ ತರಗತಿಗಳಿಗೆ ಅಗತ್ಯ ಸೌಲಭ್ಯಗಳಿಂದ ವಂಚಿತರಾಗಿದ್ದರು.
ಈ ಬಗ್ಗೆ ಮಾಹಿತಿ ತಿಳಿದ ಗ್ರಾಮ ಪಂಚಾಯತಿ ನಿಕಟಪೂರ್ವ ಅಧ್ಯಕ್ಷೆ ಹಾಗೂ ವಾರ್ಡ್ ಸದಸ್ಯೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆಯೂ ಆಗಿರುವ ರೂಪವಾಣಿ ಆರ್ ಭಟ್ ಟಿವಿಗೆ ಡಿಶ್ ಆಂಟೆನಾ ಹಾಗೂ ಅಗತ್ಯದ ಸಾಮಗ್ರಿಗಳನ್ನು ಖರೀದಿಸಿ ನೀಡುವಲ್ಲಿ ದಾನಿಗಳನ್ನು ಸಂಪರ್ಕಿಸಿ ವ್ಯವಸ್ಥೆ ಮಾಡಿದ್ದು ಸರ್ವತ್ರ ಶ್ಲಾಘನೆಗೆ ಪಾತ್ರರಾದರು.
ವಿದ್ಯಾರ್ಥಿಗಳ ಮನೆಯಲ್ಲಿ ಇತ್ತೀಚೆಗೆ ನಡೆದ ಸರಳ ಸಮಾರಂಭದಲ್ಲಿ ಬಿಜೆಪಿ ಕಜಂಪಾಡಿ ವಾರ್ಡ್ ಸಮಿತಿಯ ನೇತೃತ್ವದಲ್ಲಿ ಅವರಿಗೆ ಇದನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಪಂಚಾಯತಿ ಸಮಿತಿ ಅಧ್ಯಕ್ಷ ಉದಯ ಚೆಟ್ಟಿಯಾರ್, ಕಜಂಪಾಡಿ ವಾರ್ಡ್ ಸಮಿತಿಯ ಪ್ರಮುಖ ಮನೋಜ್ ಮುಗುಳಿಮೂಲೆ, ಮಂಜುನಾಥ, ಮನೀಶ, ಶಶಿ ಮೊದಲಾದವರು ಉಪಸ್ಥಿತರಿದ್ದರು. ಆನ್ ಲೈನ್ ತರಗತಿಗಳಿಗೆ ವ್ಯವಸ್ಥೆಯಿಲ್ಲದೆ ಕೇರಳದಲ್ಲಿ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆಗೈದ ಪ್ರಕರಣ ನಡೆದ ಬಳಿಕ ಪಂಚಾಯತಿಗಳಿಗೆ ಸರ್ಕಾರ ವಿವಿಧ ಸಂಘಟನೆಗಳು ಹಾಗೂ ದಾನಿಗಳ ಮುಖಾಂತರ ಇಂಥ ಅಗತ್ಯಗಳಿಗೆ ಅಧಿಕೃತರು ಸ್ಪಂದಿಸಬೇಕೆಂಬ ನಿರ್ದೇಶನ ನೀಡಿದ್ದು ಪಂಚಾಯತಿ ಸದಸ್ಯೆಯ ಈ ಕ್ರಮ ಮಾದರಿಯಾಗಲಿದೆ.


