ಮಂಜೇಶ್ವರ: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಮಂಜೇಶ್ವರ ಘಟಕದ ಆಶ್ರಯದಲ್ಲಿ ಮಂಜೇಶ್ವರ ವಿದ್ಯುತ್ ಕಛೇರಿಯ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಘಟಕದ ಅಧ್ಯಕ್ಷ ಬಶೀರ್ ಕನಿಲ ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿ ಕೋವಿಡ್ ಪ್ರತಿರೋಧ ಕ್ರಮಕ್ಕೆ ಸಹಕಾರ ನೀಡುತ್ತಿರುವ ವ್ಯಾಪಾರಿ ಮುಂಗಟ್ಟುಗಳ ಮಾಲೀಕರ ಬಗ್ಗೆ ಸರ್ಕಾರ ನಿರ್ಲಕ್ಷ್ಯ ಧೋರಣೆ ತಳೆದಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರ ನಷ್ಟ ಪರಿಹಾರವನ್ನು ನೀಡಿಲ್ಲ. ಬದಲಿಗೆ ಲಾಕ್ ಡೌನ್ ಸಮಯದಲ್ಲಿ ಬಂದ್ ಮಾಡಿದ ಅಂಗಡಿಗಳಿಗೆ ಸಹಿತ ಇದೀಗ ಅಂಗಡಿಗಳಿಗೆ ಅಧಿಕ ವಿದ್ಯುತ್ ಚಾರ್ಜ್ ನೀಡಿ ಶಾಕ್ ನೀಡಿರುವುದು ಅಕ್ಷೇಪಾರ್ಹ ಎಂದರು.
ಅಂಗಡಿಗಳಿಗೆ ಅಧಿಕ ಬಿಲ್ ನೀಡಿರುವುದನ್ನು ಕೂಡಲೇ ಹಿಂತೆಗೆಯಬೇಕು. ತಿಂಗಳಿಗೊಮ್ಮೆ ಮೀಟರ್ ರೀಡಿಂಗ್ ನಡೆಸುವ ಮೂಲಕ ವ್ಯಾಪಾರಿಗಳ ಜೊತೆ ಕೈಜೋಡಿಸಬೇಕು ಮೊದಲಾದ ಹಲವಾರು ಬೇಡಿಕೆಗಳನ್ನಿಟ್ಟು ಇದೀಗ ಸೂಚನ ಪ್ರತಿಭಟನೆ ನಡೆಸಲಾಗಿದೆ. ಇದಕ್ಕೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳದಿದ್ದರೆ ಮುಂದೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದರು.
ಮಚೆರ್ಂಟ್ ವೆಲ್ಫೆರ್ ಸೊಸೈಟಿ ಅಧ್ಯಕ್ಷ ಕೃಷ್ಣ ಶೆಟ್ಟಿಗಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವ್ಯಾಪಾರಿ ಸಮಿತಿ ಪದಾಧಿಕಾರಿಗಳಾದ ಹಮೀದ್ ಹೊಸಂಗಡಿ ಸುದರ್ಶನ್, ಹಸೈನಾರ್ ಮಾಡ,ಆಹಮ್ಮದ್ ಬಾವ ಮೀಯ,ಮಚೆರ್ಂಟ್ ವೆಲ್ಫೆರ್ ಸೊಸೈಟಿ ಅಧ್ಯಕ್ಷ ಕೃಷ್ಣ ಶೆಟ್ಟಿಗಾರ್, ಪ್ರ.ಕಾರ್ಯದರ್ಶಿ ನಾರಾಯಣ ಕೆ,ವನಿತಾ ವಿಂಗ್ ಅಧ್ಯಕ್ಷೆ ಕುಮುದರಾಜ್ ಪ್ರತಿಭಟನೆಗೆ ನೇತೃತ್ವ ನೀಡಿದರು.
ಪ್ರ.ಕಾರ್ಯದರ್ಶಿ ದಯಾನಂದ ಬಂಗೇರ ಸ್ವಾಗತಿಸಿ ಹಸೈನಾರ್ ಉದ್ಯಾವರ ವಂದಿಸಿದರು. ಬಳಿಕ ವಿದ್ಯುತ್ ಅಧಿಕಾರಿಗಳಿಗೆ ವ್ಯಾಪಾರಿಗಳು ಮನವಿ ಸಲ್ಲಿಸಿದರು.


