ಕಾಸರಗೋಡು: ಸುಭಿಕ್ಷ ಕೇರಳ ಯೋಜನೆಯ ಮೂಲಕ ಜಿಲ್ಲೆಯ ಕೃಷಿ ಕ್ಷೇತ್ರವನ್ನು ಬಲಪಡಿಸುವಲ್ಲಿ ಬ್ಯಾಂಕ್ ಗಳು ಪ್ರಮುಖ ಪಾತ್ರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜೀತ್ ಬಾಬು ಹೇಳಿದರು.
ಗುರುವಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಬ್ಯಾಂಕಿಂಗ್ ಅವಲೋಕನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸುಭಿಕ್ಷ ಕೇರಳ ಯೋಜನೆಯಲ್ಲಿ 2400 ಎಕರೆ ಬಂಜರು ಭೂಮಿಯನ್ನು ಕೃಷಿಯೋಗ್ಯ ಭೂಮಿಯಾಗಿ ಪರಿವರ್ತಿಸಲು ಗುರುತಿಸಲಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್‍ಗಳನ್ನು ಹೊಂದಿರುವ ರೈತ ಗುಂಪುಗಳಿಗೆ ಕೃಷಿಯನ್ನು ಸಶಕ್ತಗೊಳಿಸಲು ಬ್ಯಾಂಕುಗಳ ಸಹಾಯ-ಅನುದಾನಗಳ ಅಗತ್ಯವಿದೆ. ಇತರ ರಾಜ್ಯ ಮತ್ತು ವಿದೇಶಗಳಲ್ಲಿ ಉದ್ಯೋಗ ಕಳೆದುಕೊಂಡವರಿಗೆ ಸಹಾಯ ಮಾಡಲು ಬ್ಯಾಂಕುಗಳು ಸಿದ್ಧವಾಗಬೇಕು. ಯೋಜನೆಗಳ ರೂಪುರೇಖೆ ತಯಾರಿಗೆ ಜಿಲ್ಲೆಯ ಆಡಳಿತ ಮತ್ತು ಜಿಲ್ಲಾ ವ್ಯವಸ್ಥೆಯು ಅಭಿವೃದ್ಧಿಯೊಂದಿಗೆ ಕೈಜೋಡಿಸುತ್ತದೆ. ಭತ್ತದ ಕೃಷಿಯ ಜೊತೆಗೆ ಕೋಳಿ, ಮೀನು ಸಾಕಾಣಿಕೆ ಮತ್ತು ಜಾನುವಾರು ಸಾಕಣೆಯಲ್ಲಿ ಸುಭಿಕ್ಷ ಯೋಜನೆಯ ಭಾಗವಾಗಿ ಹೊಸ ಯೋಜನೆಗಳನ್ನು ಪರಿಚಯಿಸಲಾಗಿದೆ. ಸ್ಥಳೀಯ ಸರ್ಕಾರಿ ಸಂಸ್ಥೆಗಳ ವಾರ್ಷಿಕ ಯೋಜನೆಯಲ್ಲಿ ಇದನ್ನು ಸೇರಿಸಲಾಗಿದೆ. ಹಿಂದಿರುಗಿರುವ ವಲಸಿಗರು ಸಹ ಯೋಜನೆಯ ಭಾಗವಾಗಲಿದ್ದಾರೆ. ಜಿಲ್ಲೆಯ ಬ್ಯಾಂಕ್ ಗಳ ಅಸ್ತಿತ್ವ ಉಳಿಯಲು ಎನ್‍ಆರ್‍ಇ ಹೂಡಿಕೆ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಬ್ಯಾಂಕಿಂಗ್ ಕ್ಷೇತ್ರವು ಸರ್ಕಾರದ ಯೋಜನೆಯೊಂದಿಗೆ ಕೈಜೋಡಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕೋವಿಡ್ ಭೀತಿಯ ಸಂದರ್ಭ ಜಿಲ್ಲೆಯ ಬ್ಯಾಂಕ್ ಗಳು ವಹಿಸಿದ ಪಾತ್ರವನ್ನು ಜಿಲ್ಲಾಧಿಕಾರಿ ಶ್ಲಾಘಿಸಿದರು. ಕೋವಿಡ್ ಸಮಯದಲ್ಲಿ ಬ್ಯಾಂಕ್ ಗಳು ತೆರೆದುದರಿಂದ ಸಾಮಾನ್ಯ ಜನರಿಗೆ ದೊಡ್ಡ ಕೊಡುಗೆಯಾಗಿ ಪರಿಗಣಿಸಲ್ಪಟ್ಟಿದೆ. ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳ ಅಭಿವೃದ್ಧಿಗೆ ಮತ್ತು ಕೇಂದ್ರ - ರಾಜ್ಯ ಸರ್ಕಾರಗಳ ಯೋಜನೆಗಳು ಅರ್ಹ ಫಲಾನುಭವಿಗಳನ್ನು ತಲುಪಲು ಬ್ಯಾಂಕಿಂಗ್ ವ್ಯವಸ್ಥೆಯು ಅಗತ್ಯ ನೆರವು ನೀಡಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಮಾರ್ಚ್ 31 ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಜಿಲ್ಲೆಯ ಬ್ಯಾಂಕಿಂಗ್ ವ್ಯವಸ್ಥೆಯು ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಶೇಕಡಾ 103.82 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಸಣ್ಣ ಮತ್ತು ಮಧ್ಯಮ ವಲಯವು ಶೇಕಡಾ 84.60 ರಷ್ಟು ಮತ್ತು ತೃತೀಯ ವಲಯವು ಶೇಕಡಾ 121.98 ರಷ್ಟು ಪ್ರಗತಿಯನ್ನು ದಾಖಲಿಸಿದೆ.
ಜಿಲ್ಲಾಧಿಕಾರಿ ಡಾ.ಡಿ.ಸಜೀತ್ ಬಾಬು ನಬಾರ್ಡ್ ಎಜಿಎಂ ಜ್ಯೋತಿಸ್ ಎಂ ಜಗನಾಥ್, ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಎನ್ ಕಣ್ಣನ್, ಕೆನರಾ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ರೆಗ್ಗೀ ಆರ್.ಆರ್, ವಿವಿಧ ಬ್ಯಾಂಕುಗಳ ಪ್ರತಿನಿಧಿಗಳು ಮತ್ತು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.


