ಉಪ್ಪಳ: ಯುವ ತಲೆಮಾರು ಕೃಷಿ ಕ್ಷೇತ್ರದಲ್ಲಿ ತೊಡಗಿಕೊಳ್ಳುತ್ತಿರುವುದು ಸಂತಸದ ವಿಚಾರವಾಗಿದೆ. ಮೀನುಗಾರಿಕೆ, ಮಾಂಸ ಉತ್ಪಾದನೆ, ಜಾನುವಾರು ಸಾಕಾಣೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಜಿಲ್ಲೆಯು ಮಾದರಿಯಾಗುತ್ತಿದೆ. ಜಿಲ್ಲೆಯಲ್ಲಿ ಮೀನು ಸಾಕಾಣೆಯ ಮಾದರಿ ಯೋಜನೆಯು ಪ್ರಥಮವಾಗಿ ಪೈವಳಿಕೆಯಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಚಾರ. ಈ ಹಿಂದೆ ಜಲ ಸಂರಕ್ಷಣೆಯ ನಿಟ್ಟಿನಲ್ಲಿ ಬಿದಿರು ನೆಡುವ ಮಹತ್ತರ ಯೋಜನೆಯನ್ನು ಕಳೆದ ಜೂನ್‍ನಲ್ಲಿ ಜಿಲ್ಲೆಯಾದ್ಯಂತ ಆರಂಭಿಸಲಾಗಿತ್ತು, ಇದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಬೇಸಿಗೆ ಕಾಲದಲ್ಲಿ ನೀರಿನ ಕ್ಷಾಮವನ್ನು ಇಲ್ಲವಾಗಿಸುವ ನಿಟ್ಟಿನಲ್ಲಿ ಇದೊಂದು ದೊಡ್ಡ ಪ್ರಯತ್ನವಾಗಿದೆ ಎಂದು ಕಾಸರಗೋಡು ಜಿಲ್ಲಾಧಿಕಾರಿ ಡಾ. ಡಿ.ಸಜಿತ್ ಬಾಬು ಹೇಳಿದರು.
ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್ ಮೂಲಕ ಜಾರಿಗೊಳಿಸಲಾಗುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸುಭಿಕ್ಷ ಕೇರಳ ಯೋಜನೆಯ ಅಂಗವಾಗಿ ಆರಂಭಿಸಲಾದ ತರಕಾರಿ ಕೃಷಿ ಮತ್ತು ಸಂಯೋಜಿತ ಮೀನು ಸಾಕಾಣೆ ಯೋಜನೆಯನ್ನು ಶುಕ್ರವಾರ ಬೆಳಗ್ಗೆ ಪೈವಳಿಕೆ ಸಮೀಪದ ಲಾಲ್‍ಭಾಗಿನ ಮುಯೂರ ಕಾಟೇಜ್ ಸಮೀಪದ ಒಂದು ಎಕರೆ ಪ್ರದೇಶದಲ್ಲಿ ಆರಂಭಿಸಲಾದ ತರಕಾರಿ ಕೃಷಿ ಯೋಜನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ನಾಲ್ಕು ತರಹದ ಸುರಕ್ಷಾ ಯೋಜನೆಗಳನ್ನು ಸಾಕಾರದ ಮಾಡಲಾಗುತ್ತಿದೆ. ಜಲ ಸುರಕ್ಷೆಯ ಭಾಗವಾಗಿ 450 ಕೆರೆಗಳ ಪುನಶ್ಚೇತನಕ್ಕೆ ಕಾರ್ಯ ಯೋಜನೆ ರೂಪಿಸಲಾಗಿದೆ. 4 ದೊಡ್ಡ ಕೆರೆಗಳ ಪುನಶ್ಚೇತನ ಕಾರ್ಯ ನಡೆದಿದೆ. ಜಿಲ್ಲೆಯ 11 ನದಿಗಳಲ್ಲಿ ಸುಸಜ್ಜಿತ ತಡೆಗೋಡೆ ನಿರ್ಮಾಣ, 600 ರಷ್ಟು ಚೆಕ್ ಡ್ಯಾಂ ನಿರ್ಮಾಣ ಕಾರ್ಯ ಮುಂದುವರಿದಿದೆ. ಕೃಷಿ ಯೋಜನೆಗಳ ಸಾಕಾರಕ್ಕೆ ನೀರಿನ ಅವಶ್ಯಕತೆ ಹೆಚ್ಚಿದ್ದು ಇದನ್ನು ಸಾಕಾರಗೊಳಿಸಲಾಗುವುದು. ಬ್ರಹ್ಮಗಿರಿ ಅರ್ಬನ್ ಸೊಸೈಟಿ ಮೂಲಕ ಕೋಳಿ ಸಾಕಾಣೆಯನ್ನು ಪ್ರೋತ್ಸಾಹಿಸಲಾಗುತ್ತಿದೆ, ಆಹಾರ ಸುರಕ್ಷೆ, ಆರ್ಥಿಕ ಸುರಕ್ಷೆ ಮತ್ತು ಸಾಮಾಜಿಕ ಸುರಕ್ಷೆ ಅತ್ಯಮೂಲ್ಯವಾಗಿವೆ ಎಂದರು. ಪಂಚಾಯತಿ ಪರಿಧಿಯಲ್ಲಿ ಜಲನಿಧಿ ಯೋಜನೆಯ ಸಮಸ್ಯೆಯ ಬಗೆಹರಿಸಲು ಪ್ರಯತ್ನಿಸಲಾಗುತ್ತಿದೆ. ಇತ್ತೀಚೆಗೆ ನಡೆದ ವಿಡಿಯೋ ಕಾನ್ಫರೆನ್ಸ್ ಮೂಲಕ ಜಲನಿಧಿ ಸಮಸ್ಯೆ ಬಗೆಹರಿಸುವ ಬಗ್ಗೆ ಮಾತನಾಡಲಾಗಿದೆ ಎಂದರು. ಯುವ ಸಂಘಟನೆಗಳ ನೇತೃತ್ವದಲ್ಲಿ ನಡೆಯುವ ಇಂತಹ ಆಹಾರ ಸುರಕ್ಷಾ ಯೋಜನೆಗಳು ಎಲ್ಲರಿಗೂ ಮಾದರಿ ಎಂದರು. ಕುಡಾಲು ಬಯಲಿನಂತಹ ಬಂಜರು ಭೂಮಿಯಲ್ಲಿ ಮಣ್ಣು ಪರೀಕ್ಷೆಯ ಮೂಲಕ ಫಲವತ್ತತೆಯನ್ನು ಆಧರಿಸಿ ಕೃಷಿ ಕಾರ್ಯಕ್ಕೆ ಸಹಕಾರ ನೀಡಲಾಗುವುದು ಎಂದು ಅವರು ತಿಳಿಸಿದರು. ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಯೋಜನೆಯನ್ನು ರೂಪಿಸುತ್ತಿರುವ ಪೈವಳಿಕೆ ಗ್ರಾ.ಪಂ ಹಾಗೂ ಯುವ ಸಂಘಟನೆಯ ಕಾರ್ಯ ತತ್ಪರತೆಯ ಬಗ್ಗೆ ಮೆಚ್ಚುಗೆಯ ಮಾತಗಳನ್ನಾಡಿದರು. ನಂತರ ಮೀನು ಸಾಕಾಣೆ ಯೋಜನೆಯನ್ನು ಉದ್ಘಾಟಿಸಿ, ವೀಕ್ಷಿಸಿದರು. ತರಕಾರಿ ಗಿಡವನ್ನು ನೆಡುವ ಮೂಲಕ ತರಕಾರಿ ಕೃಷಿಗೆ ಚಾಲನೆ ನೀಡಿದರು.
ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಅಶ್ವಥ್ ಪೂಜಾರಿ ಲಾಲ್‍ಭಾಗ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪೈವಳಿಕೆ ಗ್ರಾ.ಪಂ ಅಧ್ಯಕ್ಷೆ ಭಾರತಿ.ಜೆ.ಶೆಟ್ಟಿ ಶುಭಾಶಂಸನೆಗೈದು, ತರಕಾರಿ ಬೆಳೆ ಯೋಜನೆ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಂಜೇಶ್ವರ ಸಹಾಯಕ ರಿಜಿಸ್ಟ್ರಾರ್ ರಾಜಗೋಪಾಲನ್.ಎ, ಮಂಜೇಶ್ವರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಬಿ.ವಿ ರಾಜನ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು ಯೋಜನಾಧಿಕಾರಿ ಚೇತನಾ.ಎಂ, ಉದ್ಯಮಿ ಇಬ್ರಾಹಿಂ ನಾಟೇಕಲ್, ಪೈವಳಿಕೆ ಗ್ರಾ.ಪಂ ಉಪಾಧ್ಯಕ್ಷೆ ಸುನೀತಾ ವಲ್ಟಿ ಡಿ'ಸೋಜಾ, ವಾರ್ಡ್ ಸದಸ್ಯೆ ರಜಿಯಾ ರಜಾಕ್, ಪೈವಳಿಕೆ ಕೃಷಿ ಅಧಿಕಾರಿ ಅಂಜನಾ, ಫಿಶರೀಸ್ ವಿಭಾಗ ನಿರ್ದೇಶಕ ಸತೀಶನ್, ಸುಭಿಕ್ಷ ಕೇರಳ ಯೋಜನಾಧಿಕಾರಿ ಸುಬ್ರಹ್ಮಣ್ಯ, ಘಟಕದ ನಿರ್ವಾಹಕ ಸುನಿಲ್ ಕುಮಾರ್, ಸತ್ಯಕೃಷ್ಣನ್ ಮೊದಲಾದವರಿದ್ದರು. ಈ ಸಂದರ್ಭ ಜಿಲ್ಲಾಧಿಕಾರಿಯವರಿಗೆ ಬೋನ್ಸಾಯ್ ಗಿಡ ಮತ್ತು ಕಂಬಳದ ಚಿತ್ರ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಅತಿಥಿಗಳಿಗೆ ಅಡಿಕೆ ಗಿಡವನ್ನು ವಿತರಿಸಲಾಯಿತು. ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕ ಅಜೀಜ್ ಕಳಾಯಿ ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಸೇವಾ ಸಹಕಾರಿ ಬ್ಯಾಂಕ್ ಉದ್ಯೋಗಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.


