ತಿರುವನಂತಪುರ: ರಾಜ್ಯದ ವಿದ್ಯುತ್ ಗ್ರಾಹಕರಿಗೆ ಪ್ರಸ್ತುತ ತಿಂಗಳು ಹೇರಲ್ಪಟ್ಟ ಅಧಿಕ ವಿದ್ಯುತ್ ಬಿಲ್ ಕುರಿತು ಕೇರಳ ಉಚ್ಚ ನ್ಯಾಯಾಲಯವು ಸೋಮವಾರ ರಾಜ್ಯ ವಿದ್ಯುತ್ ಪ್ರಸರಣ ಬೋರ್ಡ್ (ಕೆಎಸ್‍ಇಬಿ)ಗೆ ಸ್ಪಷ್ಟನೆ ಕೇಳಿದೆ. ಮುವಾಟ್ಟುಪುಳ ನಿವಾಸಿ ಈ ಅರ್ಜಿಯನ್ನು ಸಲ್ಲಿಸಿದ್ದರ ಮೇರೆಗೆ ಸೋಮವಾರ ನ್ಯಾಯಾಲಯ ದೂರನ್ನು ಪರಿಗಣಿಸಿತ್ತು. ಬುಧವಾರ ಮತ್ತೆ ವಿಚಾರಣೆ ಮುಂದುವರಿಸಲಿದೆ ಎಂದು ನ್ಯಾಯಾಲಯ ತಿಳಿಸಿದೆ.
ವಿದ್ಯುತ್ ಬಿಲ್ ನ್ನು ಅಸಮರ್ಪಕ ರೀತಿಯಲ್ಲಿ ಗ್ರಾಹಕರಿಗೆ ನೀಡಲಾಗಿದೆ ಎಂದು ಆರೋಪಿಸಿ ಮುವಾಟ್ಟುಪುಳ ಪಾಯಾತ್ರ ಪಂಚಾಯತಿ ಸದಸ್ಯ ಎಂ.ಸಿ. ವಿನಯನ್ ಅವರು ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿನ ಪ್ರಮುಖ ಆರೋಪವೆಂದರೆ ನಾಲ್ಕು ತಿಂಗಳ ಬಿಲ್ ಶುಲ್ಕವನ್ನು ಏಕರೂಪವಾಗಿ ರಚಿಸಲಾಗಿದೆ ಎನ್ನುವುದಾಗಿದೆ. ಕೆಎಸ್‍ಇಬಿ ಅಧಿಕ ಬಿಲ್ ವ್ಯವಸ್ಥೆಯು ಅಶಾಸ್ತ್ರೀಯವಾಗಿದ್ದು, ಗ್ರಾಹಕರಿಗೆ ತೀವ್ರ ಹೊರೆಯಾಗಲಿದೆ. ಈ ನಿಟ್ಟಿನಲ್ಲಿ ಅನ್ಯಾಯವನ್ನು ನಿಯಂತ್ರಿಸಲು ನ್ಯಾಯಾಲಯ ಮಧ್ಯಪ್ರವೇಶಿಸಬೇಕು ಎಂದು ಅರ್ಜಿದಾರರು ಒತ್ತಾಯಿಸಿದ್ದರು.
ಈ ಮಧ್ಯೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಗ್ರಾಹಕರ ಮನೆಗಳಿಗೆ ತೆರಳಿ ಬಿಲ್ ರೀಡಿಂಗ್ ನಿರ್ವಹಿಸಲಾಗಲಿಲ್ಲ. ಈ ಕಾರಣದಿಂದ ತಾರೀಫ್ ನಲ್ಲಿ ವ್ಯತ್ಯಾಸವಾಗಿ ಗ್ರಾಹಕರ ಬಿಲ್ ಮೊತ್ತದಲ್ಲಿ ಹೆಚ್ಚಳ ಉಂಟಾಗಿದೆ ಎಂದು ಕೆಎಸ್‍ಇಬಿ ಮೂಲಗಳು ತಿಳಿಸಿವೆ. ಲಾಕ್‍ಡೌನ್ ಸಮಯದಲ್ಲಿ, ಗ್ರಾಹಕರಿಗೆ ಆ ಎರಡು ತಿಂಗಳ ಮೀಟರ್ ರೀಡಿಂಗ್ ನ ಸರಾಸರಿಯನ್ನು ಆಧರಿಸಿ ಬಿಲ್ ತಯಾರಿಸಲಾಗಿದೆ. ಬಿಲ್ ಹೆಚ್ಚಳವನ್ನು ಸೂಚಿಸಿ ಒಂದು ಲಕ್ಷಕ್ಕೂ ಹೆಚ್ಚು ದೂರುಗಳು ಬಂದಿವೆ. ಆದರೆ ಈ ದೂರುಗಳಲ್ಲಿ ಕೇವಲ ಐದು ಶೇ. ಮಾತ್ರ ಸಂಕಷ್ಟಕ್ಕೊಳಗಾದವರು ಎಂದು ಕೆಎಸ್‍ಇಬಿ ಅಧ್ಯಕ್ಷ ಎನ್‍ಎಸ್ ಪಿಳ್ಳೈ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ವಿದ್ಯುತ್ ಬಳಕೆ ಹೆಚ್ಚಾಗಿದೆ ಎಂದು ಅವರು ಬೊಟ್ಟುಮಾಡಿದರು.
ಆದರೆ ಲಾಕ್ ಡೌನ್ ಸಂದರ್ಭ ಸಂಪೂರ್ಣ ಮುಚ್ಚಲ್ಪಟ್ಟ ವ್ಯಾಪಾರ ಕೇಂದ್ರಗಳಿಗೂ ಅಧಿಕ ಮೊತ್ತದ ಬಿಲ್ ಬಂದಿರುವುದು ಹೇಗೆಂಬ ಪ್ರಶ್ನೆಗೆ ಕೆಎಸ್‍ಇಬಿ ಅಧಿಕೃತರು ಸ್ಪಷ್ಟವಾಗಿ ಉತ್ತರಿಸದೆ ಜಾರಿಕೊಂಡಿದ್ದು, ಮುಂದಿನ ಬಿಲ್ ಸಂದರ್ಭ ಹೆಚ್ಚು ಬಿಲ್‍ನ ಮೊತ್ತ ಪಾವತಿಸಿದವರಿಗೆ ಕಡಿತಗೊಳಿಸುವ ಪ್ರಯತ್ನ ಮಾಡಲಾಗುವುದೆಂದು ತಿಳಿಸಿರುವರು.


