ಕಾಸರಗೋಡು: ಪ್ರಮುಖ ಅಂತರರಾಜ್ಯ ಹೆದ್ದಾರಿಗಳಲ್ಲಿ ಕಾಸರಗೋಡು ಜಿಲ್ಲೆಯಿಂದ ಕರ್ನಾಟಕಕ್ಕೆ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಮತಿ ನೀಡುವಂತೆ ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ.ಕೆ.ಶ್ರೀಕಾಂತ್ ಮಾಧ್ಯಮ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಎರಡೂ ರಾಜ್ಯಗಳಲ್ಲಿ ಪ್ರಯಾಣಿಕರಿಗೆ ಉದ್ಯೋಗ, ಶಿಕ್ಷಣ ಮತ್ತು ಚಿಕಿತ್ಸೆಗೆ ತೆರಳಲು ಪ್ರವೇಶ ನೀಡಲು ಅಧಿಕಾರಿಗಳು ಸಿದ್ಧರಾಗಬೇಕು. ತಲಪಾಡಿ ಮೂಲಕ ರಾಷ್ಟ್ರೀಯ ಹೆದ್ದಾರಿ ಹೊರತುಪಡಿಸಿ, ಜಿಲ್ಲೆಯಲ್ಲಿ ಹಲವಾರು ಅಂತರರಾಜ್ಯ ಹೆದ್ದಾರಿಗಳಿವೆ. ಎರಡೂ ರಾಜ್ಯಗಳಲ್ಲಿ ಸಾವಿರಾರು ಜನರು ಈ ಪಥಗಳನ್ನು ಬಳಸುತ್ತಿದ್ದಾರೆ. ಉದ್ಯೋಗ ಅಗತ್ಯ ಒಳಗೊಂಡಂತೆ ಈ ಮಾರ್ಗಗಳಲ್ಲಿ ಪ್ರಯಾಣ ಪರವಾನಗಿಗಳ ಕೊರತೆಯಿಂದಾಗಿ ಅನೇಕ ಜನರು ಕಠಿಣ ಪರಿಸ್ಥಿತಿಯಲ್ಲಿದ್ದಾರೆ. ಕಾಸರಗೋಡಿನಿಂದ ಕರ್ನಾಟಕದ ಹಲವಾರು ಪ್ರಮುಖ ಕೇಂದ್ರಗಳಿಗೆ ತೆರಳಲು ತುರ್ತು ಕ್ರಮ ಕೈಗೊಳ್ಳಬೇಕೆಂದು ಅವರು ಕರೆನೀಡಿರುವರು.
ರಸ್ತೆಗಳು ಮುಚ್ಚಿದ್ದರಿಂದ ಎಣ್ಮಕಜೆ ಮತ್ತು ದೇಲಂಪಾಡಿ ಗಡಿ ಗ್ರಾಮ ಪಂಚಾಯಿತಿಗಳು ಸಹಿತ ಜಿಲ್ಲೆಯ ಕೆಲವು ಗ್ರಾಮಗಳು ಪ್ರತ್ಯೇಕವಾಗಿ ಉಳಿದು ಅತಂತ್ರತೆಗೊಳಗಾಗಿದೆ ಎಂದು ಶ್ರೀಕಾಂತ್ ಹೇಳಿರುವರು. ತಲಪಾಡಿ ರಾಷ್ಟ್ರೀಯ ಹೆದ್ದಾರಿಯಿಂದ ಮಂಗಳೂರಿಗೆ ಹೋಗುವವರಿಗೆ ವಿಶೇಷ ಅನುಮತಿ ನೀಡುವಂತೆ ಒತ್ತಾಯಿಸಿರುವರು.
ಕರ್ನಾಟಕದಲ್ಲಿ ವೈದ್ಯಕೀಯ ಚಿಕಿತ್ಸೆಗೆ ತೆರಳಲು ಅನುಮತಿ ನೀಡುವ ಕುರಿತು ಸುಪ್ರೀಂ ಕೋರ್ಟ್ ನಿರ್ದೇಶನದ ಬಳಿಕ ರಾಜ್ಯ ಸರ್ಕಾರಗಳು ಹೊರಡಿಸಿದ ಕೆಲವು ಪ್ರಸ್ತಾಪಗಳಿಂದ ಉಭಯ ರಾಜ್ಯಗಳು ಮಾಡಿಕೊಂಡ ಒಪ್ಪಂದ ಇದೀಗ ಅಡ್ಡಿಯಾಗಿದೆ. ಇದನ್ನು ನಿವಾರಿಸಲು ಕೇರಳ ಸರ್ಕಾರ ಮುಂದಾಗಬೇಕು ಎಂದು ಬಿಜೆಪಿ ಒತ್ತಾಯಿಸಿದೆ. ಜಿಲ್ಲೆಯ ಎಡ ಮತ್ತು ಬಲ ಪ್ರತಿನಿಧಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಜನರ ಸಮಸ್ಯೆಗಳನ್ನು ಪರಿಹರಿಸಲು ಕಂದಾಯ ಸಚಿವ ಇ ಚಂದ್ರಶೇಖರನ್ ಅವರು ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಚಂದ್ರಶೇಖರನ್ ಮತ್ತು ಇತರ ಜನ ಪ್ರತಿನಿಧಿಗಳು ಇನ್ನೂ ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ಶ್ರೀಕಾಂತ್ ಆರೋಪಿಸಿರುವರು.


