ಕುಂಬಳೆ: ಸೀತಾಂಗೋಳಿಯಿಂದ ಬಾಡೂರು ಮೂಲಕ ಪೆರ್ಲಕ್ಕೆ ತೆರಳುವ ರಸ್ತೆಯಲ್ಲಿ ಪುತ್ತಿಗೆ ಪರಿಸರದಲ್ಲಿ ಕುಸಿತ ಉಂಟಾಗಿದೆ. ಇದು ಭಾರೀ ಅಪಾಯಕ್ಕೆ ಕಾರಣವಾಗಿದೆ. ಪುತ್ತಿಗೆ ಗ್ರಾ.ಪಂ. ಕಾರ್ಯಾಲಯದ ಸನಿಹ ಕಡಿದಾದ ತಿರುವಲ್ಲಿ ಮಳೆ ನೀರಿನ ಕಿರು ಸೇತುವೆ ಭಾಗಶಃ ಕುಸಿದು ರಸ್ತೆ ಅಪಾಯದಲ್ಲಿದೆ.
ದಿನನಿತ್ಯ ಹಲವಾರು ಬಸ್ ಗಳು ಸಹಿತ ಇತರ ವಾಹನಗಳು ಈ ರಸ್ತೆ ಮುಖೇನ ಸಂಚರಿಸುತ್ತದೆ. ರಸ್ತೆ ಕುಸಿತದಿಂದ ಸಂಚಾರ ಮೊಟಕುಗೊಳ್ಳುವ ಭೀತಿ ಆವರಿಸಿದೆ.
ವರ್ಷಗಳ ಹಿಂದೆ ಮೆಕ್ಡಾಂ ಡಾಮರೀಕರಣಗೊಳಿಸಲಾಗಿತ್ತಾದರೂ ಕಿರು ಸೇತುವೆಗಳಿರುವಲ್ಲಿ ಡಾಮರೀಕರಣಗೊಳಿಸದಿರುವುದು ಮತ್ತು ಕುಸಿತ ಇರುವಲ್ಲಿ ತಡೆಗೋಡೆ ನಿರ್ಮಿಸದಿರುವುದು ಮಳೆಗಾಲದಲ್ಲಿ ಅಪಾಯಕ್ಕೆ ಕಾರಣವಾಗುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಪ್ರಸ್ತುತ ಕುಸಿತ ಸಾಧ್ಯತೆಯ ಪುತ್ತಿಗೆಯಲ್ಲಿ ಲೋಕೋಪಯೋಗಿ ಇಲಾಖೆ ಸೂಚನಾ ಫಲಕ ಅಳವಡಿಸಿದೆ. ಇಳಿಜಾರು ಮತ್ತು ಕಡಿದಾದ ತಿರುವು ಪ್ರದೇಶವಾಗಿರುವುದರಿಂದ ವಾಹನ ಸಂಚಾರ ಕಳವಳಕಾರಿಯಾಗಿದೆ.


