ಕಾಸರಗೋಡು: ಕಾಸರಗೋಡು ಜಿಲ್ಲೆಯ ಅತಿ ದೊಡ್ಡ ಕುಡಿಯುವ ನೀರಿನ ಯೋಜನೆಯಾಗಿರುವ ಬಾವಿಕ್ಕರೆ ರೆಗ್ಯುಲೇಟರ್ ಕಂ ಬ್ರಿಜ್(ಸೇತುವೆ) ಪೂರ್ತಿಗೊಳ್ಳಲಿದೆ. ಈ ಮೂಲಕ ಜಿಲ್ಲೆಯ ಕಾಸರಗೋಡು ಮತ್ತು ಉದುಮಾ ವಿಧಾನಸಭೆ ಕ್ಷೇತ್ರಗಳ ಕುಡಿಯುವ ನೀರಿನ ತತ್ವಾರಕ್ಕೆ ಶಾಶ್ವತ ಪರಿಹಾರ ನಿರೀಕ್ಷಿಸಲಾಗಿದೆ. ಜೊತೆಗೆ ಈ ಸಂಬಂಧ ಅನೇಕ ವರ್ಷಗಳ ಬೇಡಿಕೆ ಈಡೇರಲಿದೆ.
ಮಳೆಗಾಲದಲ್ಲಿ ಮರಳು ತುಂಬಿದ ಗೋಣಿಚೀಲಗಳನ್ನು ಇರಿಸಿ ತಾತ್ಕಾಲಿಕ ಬಂಡ್ ನಿರ್ಮಿಸುವ ದೃಶ್ಯ ಇನ್ನು ಮುಂದೆ ಕೊನೆಗೊಳ್ಳಲಿದೆ. 120.4 ಮೀಟರ್ ಉದ್ದದ ತಡೆಗೋಡೆ ಈಗ ಕೊನೆಯ ಹಂತದಲ್ಲಿದೆ ಎಂದು ಶಾಸಕ ಕೆ.ಕುಂಞÂ ರಾಮನ್ ತಿಳಿಸಿರುವರು. ಉದುಮಾ ವಿಧಾನಸಭೆ ಕ್ಷೇತ್ರದ ಪಯಸ್ವಿನಿ-ಕರಿಚ್ಚೇರಿ ನದಿಗಳ ಸಂಗಮವಾಗಿರುವ ಆಲೂರು ಮನಂಬತ್ ಎಂಬಲ್ಲಿ 2017ರಲ್ಲಿ ಕಿರು ನೀರಾವರಿ ಇಲಾಖೆ 27.75 ಕೋಟಿ ರೂ.ನ ಎಸ್ಟಿಮೇಟ್ ಸಿದ್ಧಪಡಿಸಿ ತಾಂತ್ರಿಕ, ಆರ್ಥಿಕ ಮಂಜೂರಾತಿ ಪಡೆಯಲಾಗಿತ್ತು. 2018 ರಲ್ಲಿ ಈ ಯೋಜನೆಯ ನಿರ್ಮಾಣ ಆರಂಭಗೊಂಡಿತ್ತು. ಕೋವಿಡ್ ಸೋಖು ಹರಡುವಿಕೆಯ ಹಿನ್ನೆಲೆಯಲ್ಲಿ ಕಟ್ಟುನಿಟ್ಟು ಘೋಷಿಸಿದ ಕಾರಣ ಮಾ.21ರಿಂದ ಏ.4 ವರೆಗೆ ನಿರ್ಮಾಣ ನಿಲುಗಡೆ ಮಾಡಲಾಗಿತ್ತು. ನಂತರ ವಿಶೇಷ ಮಂಜೂರಾತಿ ಪಡೆದು ನಿರ್ಮಾಣ ಪುನರಾಂಭವಿಸಲಾಗಿತ್ತು ಎಂದವರು ನುಡಿದರು.
ತಡೆಗೋಡೆಯ ಕೊನೆಯ ಹಂತದ ಕಾಮಗಾರಿಯಾಗೊರುವ ಮೆಕ್ಯಾನಿಕಲ್ ಶಟರ್ ಅಳವಡಿಸುವ ಕಾಮಗಾರಿ ಇದೀಗ ನಡೆಯುತ್ತಿದೆ. 2.70 ಮೀ. ಉದ್ದ, 12 ಮೀ. ಅಗಲದ 4 ಸ್ಟೀಲ್ ಶಟರ್ ಗಳನ್ನು ಯಾಂತ್ರಿಕ ಸಹಾಯೊಂದಿಗೆ ಅಳವಡಿಸಲಾಗುತ್ತಿದೆ. ತಡೆಗೋಡೆಯ ತೆಂಕಣ ಭಾಗದಲ್ಲಿ 115 ಮೀ. ಉದ್ದದ ಕಾಂಕ್ರೀಟು ಭಿತ್ತಿ ನಿರ್ಮಾಣ ಚುರುಕಿನಿಂದ ಸಾಗುತ್ತಿದೆ. ತಡೆಗೋಡೆಯ ಮೂರು ಮೀ. ಉದ್ದದ ಅಳತೆ ವರೆಗೆ ನೀರು ಸಂಗ್ರಹ ಸಾಧ್ಯವಾಗಲಿದೆ. 4 ಮೀ. ದೂರದಲ್ಲಿ ಜಲಮಟ್ಟ ಹೆಚ್ಚಳಗೊಳ್ಳಲಿದೆ. ನೂತನವಾಗಿ ನಿರ್ಮಿಸಲಾದ 5 ಕಂಭಗಳಲ್ಲಿ 9.6 ಮೀಟರ್ ಎತ್ತರದಲ್ಲಿ ಶಟರ್ ಗಳು ಇರುವುವು. ಪಾಂಡಿಕಂಡಂ ಭಾಗದಿಂದ, ಕರಿಚ್ಚೇರಿ ಭಾಗದಿಂದ, ಹರಿದುಬರುವ ನದಿಯ 4 ಕಿ.ಮೀ. ದೂರ ಮೂರುಮೀ. ನೀರು ಎತ್ತರಿಸಲು ಸಾಧ್ಯ. ಮಳೆಗಾಲ ಕಳೆದರೂ ನೀರು ಸಮೃದ್ಧವಾಗಿಯೇ ಇರುವುದರಿಂದ ಈ ಪ್ರದೇಶದಲ್ಲಿ ಭೂಗರ್ಭ ಜಲದ ಮಟ್ಟವೂ ಹೆಚ್ಚಿ, ನೀರಿನ ಕ್ಷಾಮ ಪರಿಹಾರವಾಗಲಿದೆ ಎಂದು ಶಾಸಕರು ತಿಳಿಸಿರುವರು.

