ಮಂಜೇಶ್ವರ: ಜಿಲ್ಲೆಯಿಂದ ಉದ್ಯೋಗ, ವ್ಯಾಪಾರ, ಚಿಕಿತ್ಸೆ ಸಹಿತ ಅಗತ್ಯಗಳಿಗಾಗಿ ತೆರಳುವರಿಗೆ ಪಾಸ್ ನೀಡಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ದಕ್ಷಿಣ ಕನ್ನಡ ಬಿಜೆಪಿ ನಾಯಕರ ನಡುವಿನ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲಾಗಿದೆ.
ಬಿಜೆಪಿಯ ಕಾಸರಗೋಡು ಜಿಲ್ಲಾ ಸಮಿತಿ ಸೋಮವಾರ ತಲಪ್ಪಾಡಿಯಲ್ಲಿ ಸೋಮವಾರ ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕ ವೇದವ್ಯಾಸ ಕಾಮತ್, ಡಾ. ಭರತ್ ಕೆ. ಶೆಟ್ಟಿ, ಕೆ. ಭಾರತ್ ಶೆಟ್ಟಿ ಅವರ ಮಧ್ಯಸ್ಥಿಕೆ ಚರ್ಚೆಯಲ್ಲಿ ಈ ವಿಷಯವನ್ನು ಬಗೆಹರಿಸಲಾಗಿದೆ. ಈ ಬಗ್ಗೆ ನಡೆದ ಒಪ್ಪಂದದ ಪ್ರಕಾರ, ಪ್ರತೀ ದಿನ ಉದ್ಯೋಗಕ್ಕಾಗಿ ತೆರಳುವರಿಗೆ ಪಾಸ್ ನೀಡಲು ಅಕಾರಿಗಳು ಭರವಸೆ ನೀಡಿದ್ದಾರೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ರಸ್ತೆಗಳನ್ನು ಮುಚ್ಚಿದ ನಂತರ ಜಿಲ್ಲೆಯ ಕೆಲವು ಗ್ರಾಮಗಳ ಸಂಚಾರ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ನಿರ್ಧರಿಸಲಾಯಿತು.
ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ ಕೆಲವು ಪ್ರಮುಖ ರಸ್ತೆಗಳಲ್ಲಿ ಸ್ಥಳೀಯರಿಗೆ ಅನುಮತಿ ನೀಡುವ ವಿಷಯದ ಬಗ್ಗೆ ಪರಿಶೀಲಿಸುವ ಬಗ್ಗೆ ಅಕಾರಿಗಳು ಭರವಸೆ ನೀಡಿದ್ದಾರೆ. ಪುತ್ತೂರು, ಸುಳ್ಯ ಶಾಸಕರ ನೇತೃತ್ವದ ಉನ್ನತ ಮಟ್ಟದ ಅಕಾರಿಗಳ ಸಭೆ ಕರೆಯಲು ಸಹ ತೀರ್ಮಾನಿಸಲಾಯಿತು.
ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗುವವರಿಗೆ ಅನುಮತಿ ನೀಡುವ ಬಗ್ಗೆ ಸುಪ್ರೀಂ ಕೋರ್ಟ್ ಆದೇಶ ಇರುವುದರಿಂದ, ಎರಡು ರಾಜ್ಯ ಸರ್ಕಾರಗಳು ಮಧ್ಯಪ್ರವೇಶಿಸಿ ಪರಿಹಾರವನ್ನು ಕಂಡುಕೊಳ್ಳಬೇಕು. ಕಾಸರಗೋಡಿನ ಬಿಜೆಪಿ ಸಮಿತಿಯು ಈ ಕುರಿತು ಉಭಯ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸುವುದು. ಕರ್ನಾಟಕ ಸರ್ಕಾರದ ಕಡೆಯಿಂದ ಮಧ್ಯಸ್ಥಿಕೆ ವಹಿಸಿದ್ದ ಇಬ್ಬರು ಶಾಸಕರು ಸಭೆಗೆ ಒತ್ತಡಹೇರಲಾಗುವುದು ಭರವಸೆ ನೀಡಿದರು. ಕಾಸರಗೋಡು ಬಿಜೆಪಿ ಜಿಲ್ಲಾ ನೇತೃತ್ವವು ಕೇರಳ ಸರ್ಕಾರದಿಂದ ಕ್ರಮ ತೆಗೆದುಕೊಳ್ಳಲು ಒತ್ತಡ ಹೇರಲು ಮತ್ತು ಮಧ್ಯಪ್ರವೇಶಿಸಲು ಕ್ರಮ ಕೈಗೊಳ್ಳಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ತಿಳಿಸಿದರು.
ಎರಡು ಜಿಲ್ಲೆಗಳ ನಡುವೆ ಯಾವುದೇ ವಿವಾದಗಳು ಅಥವಾ ಸಮಸ್ಯೆಗಳಿದ್ದರೆ ಅದನ್ನು ಸಹ ಬಗೆಹರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಹಾಯಕ ಆಯುಕ್ತ ಮದನ್ ಮೋಹನ್, ಎಸಿಪಿ ಕೊದಂಡ ರಾಮ, ದಕ್ಷಿಣ ಕನ್ನಡ ಶಾಸಕರಾದ ಡಾ.ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಮಂಗಳೂರು ಮೇಯರ್ ದಿವಾಕರ ಮತ್ತು ಕಾಪೆರ್Çರೇಟರ್ ಸುರೇಶ್ ಶೆಟ್ಟಿ, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸುದರ್ಶನ ಎಂ., ಜಿಲ್ಲಾ ಉಪಾಧ್ಯಕ್ಷರು ಈಶ್ವರ ಕಟೀಲ್, ಸಂತೋಷ್ ಕುಮಾರ್ ಬೋಳಿಯಾರ್, ಬಿಜೆಪಿ ದಕ್ಷಿಣ ಕನ್ನಡ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ ಪಂಡಿತ್ ಹೌಸ್, ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ, ಜಿಲ್ಲಾ ಉಪಾಧ್ಯಕ್ಷ ನ್ಯಾಯವಾದಿ ಸದಾನಂದ ರೈ, ಜಿಲ್ಲಾ ಕಾರ್ಯದರ್ಶಿ ವಿಜಯ್ ಕುಮಾರ್ ರೈ, ಮಂಜೇಶ್ವರ ಕ್ಷೇತ್ರದ ಅಧ್ಯಕ್ಷ ಮಣಿಕಂಠ ರೈ, ಪ್ರಧಾನ ಕಾರ್ಯದರ್ಶಿ ಬಿ.ಎಂ. ಆದರ್ಶ್ ಒಬಿಸಿ ಮೋರ್ಚಾ ರಾಜ್ಯ ಖಜಾಂಚಿ ನ್ಯಾಯವಾದಿ ನವೀನ್ ರಾಜ್ ಮುಂತಾದವರು ಚರ್ಚೆಯಲ್ಲಿ ಭಾಗವಹಿಸಿದರು. ದಕ್ಷಿಣ ಕನ್ನಡ ಜಿಲ್ಲಾಡಳಿತದ ಭರವಸೆಯ ಮೇರೆಗೆ ಬಿಜೆಪಿಯ ಪ್ರತಿಭಟನೆಯನ್ನು ಕೊನೆಗೊಳಿಸಲಾಗಿದೆ ಎಂದು ಕಾಸರಗೋಡು ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ತಿಳಿಸಿದ್ದಾರೆ.



