ನವದೆಹಲಿ: ಶ್ರೇಣೀಕೃತ ನೀತಿ ಮತ್ತು ಸಮಗ್ರ ವಿಧಾನಗಳಿಂದ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 28, 472 ಜನರು ಕೊವಿಡ್ ಸೋಂಕಿನಿಂದ ಚೇತರಿಸಿಕೊಳ್ಳಲು ಕಾರಣವಾಗಿದ್ದು, ಇದರೊಂದಿಗೆ ಚೇತರಿಸಿಕೊಂಡ ಪ್ರಕರಣಗಳ ಒಟ್ಟು ಸಂಖ್ಯೆ 7,53,049ಕ್ಕೆ ತಲುಪಿದೆ ಎಂದು ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ.
ನಿನ್ನೆ ಚೇತರಿಕೆ ಪ್ರಮಾಣ ಶೇ 63.13ಕ್ಕೆ ಏರಿದ್ದು, 19 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಷ್ಟ್ರೀಯ ಸರಾಸರಿಗಿಂತ ಚೇತರಿಕೆ ಪ್ರಮಾಣ ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.ಕೋವಿಡ್ -19 ಹರಡುವಿಕೆ ತಡೆಗಟ್ಟಲು ಮತ್ತು ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡ ಕ್ರಿಯಾಪರ ಮತ್ತು ಸಂಘಟಿತ ಕ್ರಮಗಳಿಂದ ಚೇತರಿಕೆ ಪ್ರಮಾಣ ಕ್ರಮೇಣ ಏರಿಕೆಗೆ ಕಾರಣವಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ದೇಶದಲ್ಲಿ ಪ್ರಸ್ತುತ 3,41,916 ಸಕ್ರಿಯ ಪ್ರಕರಣಗಳಿದ್ದು, ಸಾವಿನ ಪ್ರಮಾಣ ಸಹ ಶೇ.2.41ಕ್ಕೆ ಕುಸಿದಿದೆ. ಸಾವಿನ ಪ್ರಮಾಣ ನಿನ್ನೆ ಶೇ.2.43 ಇತ್ತು. ಜೂನ್ 17ರಂದು ದೇಶದಲ್ಲಿ ಸಾವಿನ ಪ್ರಮಾಣ ಶೇ.3.36ರಷ್ಟು ಇತ್ತು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ನಿನ್ನೆ ದೇಶದಲ್ಲಿ ಹೊಸದಾಗಿ 37,724 ಮಂದಿಗೆ ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿದ್ದು, ಇದರೊಂದಿಗೆಸೋಂಕಿತರ ಸಂಖ್ಯೆ 11,92,915ಕ್ಕೆ ಏರಿಕೆಯಾಗಿದೆ.


