ತಿರುವನಂತಪುರ: ಓಣಂ ಸಂದರ್ಭದಲ್ಲಿ ಕರ್ನಾಟಕ ಆರ್‍ಟಿಸಿ ಕೇರಳಕ್ಕೆ ವಿಶೇಷ ಬಸ್ ಸೇವೆಗಳನ್ನು ಘೋಷಿಸಿದೆ. ಆಗಸ್ಟ್ 24 ರಿಂದ ಸೆಪ್ಟೆಂಬರ್ 6 ರವರೆಗೆ ಬೆಂಗಳೂರು ಮತ್ತು ಮೈಸೂರಿನಿಂದ ಕೇರಳದ ವಿವಿಧ ಸ್ಥಳಗಳಿಗೆ ವಿಶೇಷ ಬಸ್ ಸೇವೆ ಲಭ್ಯವಿರುತ್ತದೆ. ಮಾರ್ಚ್‍ನಲ್ಲಿ ಸ್ಥಗಿತಗೊಂಡಿದ್ದ ಅಂತರರಾಜ್ಯ ಸೇವೆಗಳು ಐದು ತಿಂಗಳ ನಂತರ ಈ ಮೂಲಕ ಪುನರಾರಂಭಗೊಳ್ಳಲಿವೆ.
ಬೆಂಗಳೂರಿನಿಂದ ಕಣ್ಣೂರು, ಎರ್ನಾಕುಳಂ, ಕಾಞಂಗಾಡ್, ಕಾಸರಗೋಡು, ಕೊಟ್ಟಾಯಂ, ಕೋಝಿಕ್ಕೋಡ್, ಪಾಲಕ್ಕಾಡ್, ತ್ರಿಶೂರ್, ತಿರುವನಂತಪುರ ಮತ್ತು ವಡಕರ ಕೇಂದ್ರಗಳಿಗೆ ಈ ಬಸ್ ಸೇವೆಗಳು ಸಂಚಾರ ನಡೆಸಲಿವೆ. ಮರಳಿ ಅದೇ ರೀತಿಯಲ್ಲಿ ಬೆಂಗಳೂರಿಗೆ ಬಸ್ ಸಂಚಾರ ಇರಲಿದೆ. ಮೈಸೂರಿನಿಂದ ತಿರುವನಂತಪುರ, ಎರ್ನಾಕುಳಂ ಮತ್ತು ಕೊಟ್ಟಾಯಂಗೆ ಬಸ್ಸುಗಳು ಲಭ್ಯವಿದೆ.
ಟಿಕೆಟ್ ಬುಕಿಂಗ್ ಈಗಾಗಲೇ ಪ್ರಾರಂಭವಾಗಿದೆ. ಕೇರಳ ಆರ್‍ಟಿಸಿ ಕೂಡ ಶನಿವಾರದಿಂದ ಟಿಕೆಟ್ ಕಾಯ್ದಿರಿಸಲು ಪ್ರಾರಂಭಿಸಿತ್ತು. ಕೇರಳದತ್ತ ಆಗಮಿಸುವ ಪ್ರಯಾಣಿಕರಿಗೆ ಕೇರಳ ಪಾಸ್ ಕಡ್ಡಾಯವಾಗಿದೆ. ಕರ್ನಾಟಕಕ್ಕೆ ಮರಳುವವರು ಕರ್ನಾಟಕದ ಸೇವಾ ಸಿಂಧುವಿನಲ್ಲಿಯೂ ನೋಂದಾಯಿಸಿಕೊಳ್ಳಬೇಕು.
ಬಸ್ ಹತ್ತುವ ಮೊದಲು, ಥರ್ಮಲ್ ಸ್ಕ್ಯಾನರ್ ಬಳಸಿ ಪರೀಕ್ಷೆ ಇರುತ್ತದೆ. ಬೆಂಗಳೂರಿನಿಂದ ಹೊರಟ ನಂತರ ವಿಶೇಷ ಬಸ್ ಗಮ್ಯಸ್ಥಾನದಲ್ಲಿ ಮಾತ್ರ ನಿಲುಗಡೆಗೊಳ್ಳುತ್ತವೆ. ನಿರ್ಗಮನದ ಮೊದಲು ಮತ್ತು ನಂತರ ಬಸ್ಸುಗಳು ಸೋಂಕು ರಹಿತವಾಗಿಸಲು ಕ್ರಮಗಳಿರಲಿವೆ. ಎಸಿ ಬಸ್‍ಗಳಲ್ಲಿ, ಸರ್ಕಾರಿ ನಿಬಂಧನೆಗಳಿಗೆ ಅನುಸಾರ ತಾಪಮಾನವನ್ನು ಸರಿಹೊಂದಿಸಲಾಗುತ್ತದೆ.
ಕೇರಳ ರಾಜ್ಯ ಸರ್ಕಾರದ ನಿರ್ದೇಶನದಂತೆ ಇತರ ರಾಜ್ಯಗಳ ಎಲ್ಲಾ ಪ್ರಯಾಣಿಕರು ಕೋವಿಡ್ ಜಾಗ್ರತಾ ನಿಬಂಧನೆಯಂತೆ ನೋಂದಾಯಿಸಿಕೊಳ್ಳಬೇಕು. ನೋಂದಣಿ ಪುರಾವೆಗಳನ್ನು ಬಸ್ ಹತ್ತುವ ಮೊದಲು ಕರ್ನಾಟಕ ಆರ್‍ಟಿಸಿ ಅಧಿಕಾರಿಗಳಿಗೆ ತೋರಿಸಬೇಕು. ಇಲ್ಲದಿದ್ದರೆ ಯಾವುದೇ ಪ್ರಯಾಣಕ್ಕೂ ಅನುಮತಿ ಇರುವುದಿಲ್ಲ. ಎಲ್ಲಾ ಪ್ರಯಾಣಿಕರು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಪ್ರಯಾಣಿಕರು ಮುಂಚಿತವಾಗಿ ಟಿಕೆಟ್‍ಗಳನ್ನು www.ksrtc.in ಅಥವಾ KSRTC/Franchise ನಲ್ಲಿ ಬುಕ್ ಮಾಡಬಹುದು.


