ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಮಳೆಯ ಬಿರುಸು ಮಂಗಳವಾರ ಶಮನಗೊಂಡಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆ ಚಟುವಟಿಕೆ ನಡೆಸುತ್ತಿದ್ದ ಎಲ್ಲ ಅಭಯಾರ್ಥಿಗಳ ಶಿಬಿರ ತೆರವುಗೊಳಿಸಲಾಗಿದೆ. ನೆರೆಹಾವಳಿ ಇತ್ಯಾದಿ ಕಾರಣಗಳಿಂದ ಜಿಲ್ಲೆಯ 4 ತಾಲೂಕುಗಳ ಒಟ್ಟು 5157 ಮಂದಿ ಸಂಬಂಧಿಕರ ಮನೆಗಳಿಗೆ ಸ್ಥಳಾಂತರಗೊಂಡಿದ್ದವರು, ಸ್ವಗೃಹಗಳಿಗೆ ಮರಳ ತೊಡಗಿದ್ದಾರೆ. ಮಳೆಯ ಬಿರುಸು ಕಡಿಮೆಗೊಂಡಿರುವ ಹಿನ್ನೆಲೆಯಲ್ಲಿ ನದಿಗಳಲ್ಲೂ ನೀರನಮಟ್ಟ ಕೆಳಮುಖವಾಗುತ್ತಿದೆ.
24 ತಾಸುಗಳ ಅವಧಿಯಲ್ಲಿ ನಡೆದ ಪಕೃತಿ ವಿಕೋಪಃ
ಕಳೆದ 24 ತಾಸುಗಳ ಅವಧಿಯಲ್ಲಿ ಕಾಸರಗೋಡು ಜಿಲ್ಲೆಯ ಕೆಲವೆಡೆ ಪ್ರಕೃತಿ ವಿಕೋಪಗಳು ಸಂಭವಿಸಿವೆ. ಅದೃಷ್ಟವಶಾತ್ ಜೀವಾಪಾಯ ಸಂಭವಿಸಿಲ್ಲ.
ಮಂಜೇಶ್ವರ ತಾಲೂಕಿನಲ್ಲಿ 7 ಮನೆಗಳು ಪೂರ್ಣರೂಪದಲ್ಲಿ, 15 ಮನೆಗಳು ಭಾಗಶಃ ಹಾನಿಗೊಂಡಿವೆ. 22 ಕುಟುಂಬಗಳ 99 ಮಂದಿಸುರಕ್ಷಿತ ತಾಣಗಳಿಗೆ ವರ್ಗಾವಣೆಗೊಂಡಿದ್ದಾರೆ. ಉಪ್ಪಳ ಮುಸೋಡಿಯಲ್ಲಿ ಕಡ್ಕೊರೆತ ಪರಿಣಾಮ ರಸ್ತೆ ಹಾನಿಗೀಡಾಗಿದೆ. ಕಳೆದ ಜೂನ್ ತಿಂಗಳಲ್ಲಿ ಪುತ್ತಿಗೆ ಗ್ರಾಮ ಪಂಚಾಯತ್ ನ ಎಡನಾಡು ಗ್ರಾಮದಲ್ಲಿ ಗುಡ್ಡದಿಂದ ಮಣ್ಣುಕುಸಿತ ನಡೆದು 24 ವರ್ಷದ ವ್ಯಕ್ತಿ ಬಲಿಯಾಗಿದ್ದರು.
ಚೆಮ್ನಾಡ್ ಗ್ರಾಮದಲ್ಲಿ ಮಂಗಳವಾರ ಬೆಳಗಿನ ಜಾವ 4 ಗಂಟೆಗೆ ಮನೆಯೊಂದು ಭಾಗಶಃ ಹಾನಿಗೀಡಾಗಿ 15 ಸಾವಿರ ರೂ. ನಷ್ಟ ಅಂದಾಜಿಸಲಾಗಿದೆ.
ವೆಳ್ಳರಿಕುಂಡ್ ತಾಲೂಕಿನ ಪನತ್ತಡಿ ಗ್ರಾಮದ ಕಲ್ಲಪಳ್ಳಿ, ಪಟ್ಟೋಳಿ ಪ್ರದೇಶಗಳಲ್ಲಿ ಭೂಕುಸಿತ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯ 4 ಕುಟುಂಬಗಳ ಸದಸ್ಯರನ್ನು ಸಂಬಂಧಿಕರ ಮನೆಗಳಿಗೆ ವರ್ಗಾಯಿಸಲಾಗಿದೆ.
ನೆರೆ ಹಾವಳಿಯ ಪರಿಣಾಮ ಹೊಸದುರ್ಗ ತಾಲೂಕಿನ ಉತ್ತರ ತ್ರಿಕರಿಪುರ ಗ್ರಾಮದ 12 ಕುಟುಂಬಗಳ 48 ಮಂದಿ ಸದಸ್ಯರನ್ನು, ಹೊಸದುರ್ಗ ತಾಲೂಕಿನ ಒಂದು ಕುಟುಂಬದ 5 ಮಂದಿಯನ್ನು ಸಂಬಂಧಿಕರ ಮನೆಗಳಿಗೆ ಸ್ಥಳಾಂತರಿಸಲಾಗಿದೆ. ಕಯ್ಯೂರು ಗ್ರಾಮದ ಮನೆಯೊಂದು ಭಾಗಶಃ ಹಾನಿಗೊಂಡಿದೆ. ಕೊಡಕ್ಕಾಡ್ ಗ್ರಾಮದ ಬಾವಿಯ ಆವರಣ ಕುಸಿದಿದೆ.


