ನವದೆಹಲಿ: ಲಡಾಕ್ ಗಡಿಯಲ್ಲಿ ಚೀನಾ ಸೇನೆಯ ಉಪಟಳ ಹೆಚ್ಚಾಗುತ್ತಿರುವುದರಿಂದ ಭಾರತ ಇದೀಗ ಇಸ್ರೇಲ್ ನಿರ್ಮಿತ ಫಾಲ್ಕನ್ ವಾಯುಗಾಮಿ ರಕ್ಷಣಾ ವ್ಯವಸ್ಥೆಯನ್ನು ಖರೀದಿಸಲು ಮುಂದಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಗಡಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿದ್ದು ನಮ್ಮ ವಾಯುಸೇನೆಯನ್ನು ಬಲಾಢ್ಯಗೊಳಿಸುವ ಉದ್ದೇಶದಿಂದಾಗಿ ಅಮೆರಿಕಾ, ಫ್ರಾನ್ಸ್, ರಷ್ಯಾ ಹಾಗೂ ಇಸ್ರೇಲ್ ನಂತಹ ಬಲಾಢ್ಯ ರಾಷ್ಟ್ರಗಳೊಂದಿಗೆ ಮಹತ್ವದ ರಕ್ಷಣಾ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಇದೀಗ 1 ಬಿಲಿಯನ್ ಅಮೆರಿಕನ್ ಡಾಲರ್ ವೆಚ್ಚದಲ್ಲಿ ಇಸ್ರೇಲ್ ನ ಅತ್ಯಾಧುನಿಕ ಫಾಲ್ಕನ್ ವಾಯುಗಾಮಿ ಎಚ್ಚರಿಕೆ ಮತ್ತು ನಿಯಂತ್ರಣ ವ್ಯವಸ್ಥೆಯುಳ್ಳ ಎರಡು ವಿಮಾನಗಳನ್ನು ಖರೀದಿಸಲು ಭಾರತ ಮುಂದಾಗಿದ್ದು ಈ ಖರೀದಿಗೆ ಕ್ಯಾಬಿನೆಟ್ ಕಮಿಟಿ ಆನ್ ಸೆಕ್ಯೂರಿಟಿ ಅಂಕಿತ ಹಾಕಿದರೆ ಮುಂದಿನ ಎರಡು ಮೂರು ವರ್ಷಗಳಲ್ಲಿ ಫಾಲ್ಕನ್ ಭಾರತದ ಕೈ ಸೇರಲಿದೆ.
ಭಾರತದಲ್ಲಿ ಮೂರು 360 ಡಿಗ್ರಿ ರೊಡೋಮ್ ಮೊಂಟೆಡ್ ಏರ್ ಕ್ರಾಫ್ಟ್ ಫಾಲ್ಕನ್ ಎಡಬ್ಲ್ಯೂಎಸಿಎಸ್ ಮತ್ತು ಡಿಆರ್ ಡಿಒ ನಿರ್ಮಿಸಿರುವ ಎರಡು 240 ಡಿಗ್ರಿ ರೊಡೋಮ್ ಮೊಂಟೆಡ್ ಏರ್ ಕ್ರಾಫ್ಟ್ ಫಾಲ್ಕನ್ ಎಡಬ್ಲ್ಯೂಎಸಿಎಸ್ ಗಳು ಸೇರಿ ಐದಿವೆ. ಆದರೆ ಚೀನಾ ಬಳಿ 28 ಹಾಗೂ ಪಾಕಿಸ್ತಾನದ ಬಳಿ 7 ಫಾಲ್ಕನ್ ಇರುವುದು ಭಾರತ ಚಿಂತಿಸುವಂತೆ ಮಾಡಿತ್ತು.


