ಕಾಸರಗೋಡು: ಅಣಂಗೂರಿನಲ್ಲಿ ನಿರ್ಮಿಸಲಾಗುವ ರಾಜ್ಯ ಮಹಿಳಾ ಶಿಶು ಕಲ್ಯಾಣ ಇಲಾಖೆ ಆಶ್ರಯದ ವನ್ ಸ್ಟಾಪ್ ಸೆಂಟರ್ ನ ಶಿಲಾನ್ಯಾಸ ಮತ್ತು ಕಿನಾನೂರು-ಕರಿಂದಳಂ ಗ್ರಾಮಪಂಚಾಯತ್ ನಲ್ಲಿ ನಿರ್ಮಿಸಲಾದ ನಿರ್ಭಯ ಶೆಲ್ಟರ್ ಹೋಂನ ಉದ್ಘಾಟನೆ ಸೋಮವಾರ ಜರಗಿತು.
ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್ ವೀಡಿಯೋ ಕಾನ್ ಫೆರೆನ್ಸ್ ಮೂಲಕ ಈ ಕಾರ್ಯಗಳಿಗೆ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಸಚಿವೆ ಮಹಿಳಾ ಶಿಶು ಅಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿ ರಾಜ್ಯದ 14 ಜಿಲ್ಲೆಗಳಲ್ಲೂ ವನ್ ಸ್ಟಾಪ್ ಸೆಂಟರ್ ಗಳನ್ನು ಆರಂಭಿಸಲಾಗುವುದು. ಶೇಲ್ಟರ್ ಹೋಂಗಳ ಆಶ್ರಯದಲ್ಲಿರುವ ಮಂದಿಗೆ ರೋಗ ಬಾಧೆಯಾಗದಂತೆ ಕಾಳಜಿ ವಹಿಸಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಕೋವಿಡ್ ಪ್ರತಿರೋಧ ಚಟುವಟಿಕೆಗಳಲ್ಲಿ ಮೊದಲ ಎರಡು ಹಂತಗಳಲ್ಲಿ ಜಗತ್ತಿಗೇ ಮಾದರಿಯಾದ ಕಾಸರಗೋಡು ಜಿಲ್ಲೆ ಮೂರನೇ ಹಂತದಲ್ಲಿ ಈ ಸಂಬಂಧ ಮರಣ ಸಂಖ್ಯೆಗಳನ್ನು ಕಡಿತಗೊಳಿಸುವಲ್ಲಿ ಮತ್ತು ಸೋಂಕು ಹರಡುವಿಕೆ ತಡೆಯುವಲ್ಲಿ ತೀವ್ರ ಜಾಗ್ರತೆ ಪಾಲಿಸಬೇಕಾದ ಅಗತ್ಯವಿದೆ ಎಂದವರು ನುಡಿದರು.
ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಈ ಸಂಬಂಧ ಜರುಗಿದ ಸಮಾರಂಭದಲ್ಲಿ ಕಂದಾಯ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಎನ್.ಎ.ನೆಲ್ಲಿಕುನ್ನು, ಎಂ.ಸಿ.ಕಮರುದ್ದೀನ್, ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕ ಕೆ.ಜೀವನ್ ಬಾಬು, ಮಹಿಳಾ ಶಿಶು ಕಲ್ಯಾಣ ಇಲಾಖೆ ನಿರ್ದೇಶಕಿ ಟಿ.ವಿ.ಅನುಪಮಾ, ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ, ಪರಪ್ಪ ಬ್ಲೋಕ್ ಪಂಚಾಯತ್ ಅಧ್ಯಕ್ಷ ಪಿ.ರಾಜನ್, ಕಿನಾನೂರು-ಕರಿಂದಳಂ ಪಂಚಾಯತ್ ಅಧ್ಯಕ್ಷೆ ಎ.ವಿಧುಬಾಲಾ, ಮಹಿಳಾ ಶಿಶು ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಡೀನಾ ಭರತನ್, ಜಿಲ್ಲಾ ಶಿಶು ಸಂರಕ್ಷಣೆ ಅಧಿಕಾರಿ ಎಂ.ವಿ.ಸುನಿತಾ, ಲೋಕೋಪಯೋಗಿ ಕಟ್ಟಡ ವಿಭಾಗ ಕಾರ್ಯಕಾರಿ ಇಂಜಿನಿಯರ್ ಮುಹಮ್ಮದ್ ಮುನೀರ್ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಸ್ವಾಗತಿಸಿದರು.


